ಮೀನಿಗಿಲ್ಲ ಡಿಮ್ಯಾಂಡ್ : ಮೀನುಗಾರಿಕೆಗೂ ತಟ್ಟಿತು ಯುದ್ಧದ ಕರಿಛಾಯೆ


ಉಡುಪಿ, ಮಾರ್ಚ್ 23: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದಿಂದಾಗಿ ಕರಾವಳಿಯ ಮೀನುಗಾರರ ಬದುಕಿನ ಮೇಲೂ ಕಾರ್ಮೋಡ ಕವಿದಿದೆ. ಯುದ್ಧದ ಪರಿಣಾಮವಾಗಿ ಮೀನಿನ ರಫ್ತು ಸ್ಥಗಿತಗೊಂಡಿರುವ ಜೊತೆಗೆ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರುಗಳ ತೀವ್ರ ಅಭಾವದಿಂದಾಗಿ ಹೋಟೆಲುಗಳು ಕೂಡಾ ಮುಚ್ಚಲ್ಪಟ್ಟಿದ್ದು, ಮೀನಿನ ಬೆಲೆ ಪಾತಾಳಕ್ಕೆ ಕುಸಿದಿದೆ.

ಏಷ್ಯಾದ ಅತಿದೊಡ್ಡ ಬಂದರಿನಲ್ಲಿ ನೀರವ ಮೌನ

ಏಷ್ಯಾದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆಯಲ್ಲಿ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಹೋಟೆಲುಗಳ ಮುಚ್ಚುವಿಕೆ ಮತ್ತು ಕೇರಳಕ್ಕೆ ಸರಬರಾಜು ಮಾಡುವ ವ್ಯವಸ್ಥೆ ಹಳಿ ತಪ್ಪಿರುವುದರಿಂದ ಮೀನಿನ ಬೆಲೆಯಲ್ಲಿ ಪ್ರತಿ ಕೆಜಿಗೆ 50 ರಿಂದ 200 ರೂಪಾಯಿಗಳಷ್ಟು ಇಳಿಕೆಯಾಗಿದೆ. ಇದರಿಂದಾಗಿ ಮೀನುಗಾರರು ಮತ್ತು ಮುಖ್ಯವಾಗಿ ಮಹಿಳಾ ಮೀನು ಮಾರಾಟಗಾರರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.

ದಕ ಉಡುಪಿ ಜಿಲ್ಲೆಯಾದ್ಯಂತ ಎಲ್ಪಿಜಿ ಕೊರತೆಯಿಂದಾಗಿ ಅನೇಕ ಮಾಂಸಾಹಾರಿ ಹೋಟೆಲುಗಳು ಬಾಗಿಲು ಹಾಕಿವೆ. ಕೆಲವು ಹೋಟೆಲುಗಳು ಪರ್ಯಾಯವಾಗಿ ಮಣ್ಣಿನ ಒಲೆಗಳನ್ನು ಅವಲಂಬಿಸಿದ್ದರೂ, ಇತ್ತೀಚಿನ ರಾತ್ರಿ ಮಳೆಯು ಅದಕ್ಕೂ ಅಡ್ಡಿಯುಂಟುಮಾಡಿದೆ.

ಕೆಲವು ಹೋಟೆಲುಗಳು ಒಂದು ಸಿಲಿಂಡರಿಗೆ ಬರೋಬ್ಬರಿ 1,000 ರೂಪಾಯಿಗಳಷ್ಟು ಹೆಚ್ಚಿನ ಹಣ ನೀಡಿ ಖರೀದಿಸುತ್ತಿದ್ದು, ಇದು ಗ್ರಾಹಕರ ಮೇಲೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ.

ಹೋಟೆಲುಗಳೇ ನಮ್ಮ ಪ್ರಮುಖ ಗ್ರಾಹಕರು. ಅವುಗಳು ಮುಚ್ಚಿರುವುದರಿಂದ ವ್ಯಾಪಾರ ಸಂಪೂರ್ಣ ಸ್ತಬ್ಧಗೊಂಡಿದೆ. ಸಣ್ಣ ವ್ಯಾಪಾರಿಗಳಾದ ನಮಗೆ ದಿನದೂಡುವುದು ಕಷ್ಟವಾಗಿದೆ," ಎಂದು ಸ್ಥಳೀಯ ಮಹಿಳಾ ಮೀನು ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.

ಯುದ್ಧದ ಮೋಡಗಳು ಸರಿದು, ಇಂಧನ ಪೂರೈಕೆ ಸಹಜ ಸ್ಥಿತಿಗೆ ಬಂದರೆ ಮಾತ್ರ ಕರಾವಳಿಯ ಈ ಮೀನುಗಾರಿಕಾ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳಲು ಸಾಧ್ಯ. 

Previous Post Next Post

Contact Form