ಮೂಡುಬಿದಿರೆ ಗ್ಯಾರೇಜ್ ಧ್ವಂಸ: ಶೀಘ್ರವೇ 13 ಆರೋಪಿಗಳ ಬಂಧನ?


ಮೂಡುಬಿದಿರೆ: ಜಾತಿನಿಂದನೆ ಮಾಡಿ, ಅತಿಕ್ರಮವಾಗಿ ಗ್ಯಾರೇಜ್‌ಗೆ ನುಗ್ಗಿ ಗ್ಯಾರೇಜ್ ಧ್ವಂಸ ಮಾಡಿ ನಗದು ದೋಚಿದ ಪ್ರಕರಣದಲ್ಲಿ ಮೂಡುಬಿದಿರೆ ಪೊಲೀಸರು 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಾಲೂಕಿನ ಪ್ರಾಂತ್ಯ ಗ್ರಾಮದ ನಿವಾಸಿ ಪುಷ್ಪರಾಜ್ ಕೆ.ಪಿ ಅವರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದ್ದು, ಫೆಬ್ರವರಿ 15ರಂದು ಬೆಳಿಗ್ಗೆ 8.30ರ ಸುಮಾರಿಗೆ ಹಳೆ ಪೊಲೀಸ್ ಸ್ಟೇಶನ್ ಬಳಿಯ ಡೋರ್ ನಂ. 8-152 ಮತ್ತು 8-153ರ ಬಳಿ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪುಷ್ಪರಾಜ್ ಕೆ.ಪಿ ಅವರು 1981ರಿಂದ ಸದ್ರಿ ಸ್ಥಳದಲ್ಲಿ ಗ್ಯಾರೇಜ್ ನಡೆಸುತ್ತಿದ್ದು ಅವರ ಸ್ವಾಧೀನದಲ್ಲಿತ್ತು. ಈ ನಡುವೆ ಆ ಜಾಗದ ಮಾಲೀಕರಾದ ಯಶೋಧರ ಮತ್ತು ಇತರರ ವಿರುದ್ಧ ಅವರು ಮೂಡುಬಿದಿರೆಯ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಒ.ಎಸ್. ನಂ.166/2023 ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು 06-12-2024 ರಂದು ಮಧ್ಯಂತರ ತಾತ್ಕಾಲಿಕ ನಿರ್ಬಂಧಾಜ್ಞೆ ನೀಡಿ, ಪ್ರಕರಣ ಅಂತಿಮವಾಗಿ ತೀರ್ಮಾನವಾಗುವವರೆಗೆ ಡೋರ್ ನಂ. 8-152 ಮತ್ತು 8-153ರಿಂದ ದೂರುದಾರರನ್ನು ಹೊರಹಾಕದಂತೆ ಪ್ರತಿವಾದಿಗಳಿಗೆ ಆದೇಶ ನೀಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ನ್ಯಾಯಾಲಯದ ಆದೇಶವಿದ್ದರೂ ಯಶೋಧರ ಹಾಗೂ ಇತರರ ಪ್ರಚೋದನೆಯ ಮೇರೆಗೆ ತೇಜಸ್ ಶೆಟ್ಟಿ, ಪೃಥ್ವಿರಾಜ್, ರಾಜೇಶ್ ಆಚಾರ್ಯ ಸೇರಿದಂತೆ ಸುಮಾರು ಹದಿಮೂರು ಮಂದಿ ಫೆಬ್ರವರಿ 15ರಂದು ಬೆಳಿಗ್ಗೆ ಗ್ಯಾರೇಜ್‌ಗೆ ಅಕ್ರಮವಾಗಿ ಪ್ರವೇಶಿಸಿ ಜೆಸಿಬಿಯಿಂದ ಗ್ಯಾರೇಜ್ ಧ್ವಂಸ ಮಾಡಿ ಅಲ್ಲಿದ್ದ ವಾಹನ ರಿಪೇರಿ ಸಲಕರಣೆಗಳನ್ನು ಲಾರಿಯಲ್ಲಿ ತೆಗೆದುಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ. 

ಈ ವೇಳೆ ದೂರುದಾರರು ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ್ದು, ಅಲ್ಲಿಗೆ ಬಂದ ನಾಗೇಶ್, ರಮೇಶ್ ಹಾಗೂ ವಿಜಯ್ ಕುಮಾರ್ ಅವರ ಸಮ್ಮುಖದಲ್ಲಿ ಜಾತಿ ನಿಂದನೆ ಮಾಡಿದರೆಂಬ ಆರೋಪವೂ ಕೇಳಿಬಂದಿದೆ. ಘಟನೆಯಿಂದ ಸುಮಾರು ₹50,000 ಮೌಲ್ಯದ ನಷ್ಟ ಸಂಭವಿಸಿದ್ದು, ವಾರದ ಸಂಬಳದ ಸಲುವಾಗಿ ಗ್ಯಾರೇಜ್‌ನಲ್ಲಿ ಇಟ್ಟಿದ್ದ 22,000 ರೂಪಾಯಿ ನಗದು ಹಣವನ್ನೂ ದೋಚಿರುವುದಾಗಿ ದೂರುದಾರರು ಆರೋಪಿಸಿದ್ದಾರೆ. ಅಲ್ಲದೆ ತಮ್ಮ ತಂಟೆಗೆ ಬಂದರೆ ಜೀವಬೆದರಿಕೆ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೂಡುಬಿದಿರೆ ಭಾರತೀಯ ನ್ಯಾಯ ಸಂಹಿತೆ 2023ರ 189(3), 191(2), 191, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ.

Previous Post Next Post

Contact Form