ಮೂಡುಬಿದಿರೆ: ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಖಾಸಗಿ ವಿಶಾಲ್ ಬಸ್ ಬನ್ನಡ್ಕ ಸೋನ್ಸ್ ಫಾರ್ಮ್ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಬಸ್ಸಿನ ಮುಂದುಗಡೆ ಹೋಗುತ್ತಿದ್ದ ಕಾರು ಹಿಂದುಗಡೆಯಿAದ ಬರುತ್ತಿದ್ದ ಬಸ್ಸನ್ನು ಗಮನಿಸದೆ ಯೂಟರ್ನ್ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಅಪಾಯವನ್ನು ತಪ್ಪಿಸಲು ಪ್ರಯತ್ನಿಸಿರುವ ಬಸ್ ಚಾಲಕ ಎದುರಿನಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿಯಾಗಿದೆ.
ಇದೇ ವೇಳೆ ಬಸ್ ಸ್ಕೂಟಿಗೂ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಸ್ಕೂಟಿ ಸವಾರನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ 16 ಮಂದಿಗೆ ಗಾಯವಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭಾಗದಲ್ಲಿ ಹೆದ್ದಾರಿ ಇಲಾಖೆಯ ಬೇಜವಾಬ್ದಾರಿಯಿಂದ ರಸ್ತೆಯನ್ನು ಏಕಮುಖ (ಒನ್ ವೇ) ಸಂಚಾರಕ್ಕೆ ಮುಕ್ತಗೊಳಿಸಿರುವುದು ಅಪಘಾತಕ್ಕೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬನ್ನಡ್ಕ ಪರಿಸರದಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
