ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ಆಶ್ರಯದಲ್ಲಿ ಐದು ದಿನಗಳ ಕಾಲ ಸಮಾಜಮಂದಿರದಲ್ಲಿ ನಡೆಯಲಿರುವ 63ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು.
ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಅಲಂಗಾರು ಅವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನೆ ಪೂಜೆ ಹಾಗೂ ಗಣಹೋಮ ನೆರವೇರಿತು.
ಶಾಸಕ ಉಮಾನಾಥ್ ಕೋಟ್ಯಾನ್ ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಿದರು.ಕಳೆದ 63 ವರ್ಷಗಳಿಂದ ಸಮಾಜ ಮಂದಿರದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿರುವ ಈ ಗಣೇಶೋತ್ಸವವು ಇದೀಗ ಮೂಡುಬಿದಿರೆ ಪರಿಸರದ ಅತಿದೊಡ್ಡ ಜಾತ್ರೆಯಾಗಿ ಮಾರ್ಪಟ್ಟಿದೆ. ಸಾರ್ವಜನಿಕ ಗಣಪತಿಯಲ್ಲಿ ಬೇಡಿಕೊಂಡ ಪ್ರಾರ್ಥನೆಗಳು ಶೀಘ್ರವೇ ಸಿದ್ಧಿಸುತ್ತವೆ ಎಂಬುದು ಭಕ್ತರ ಅಪಾರ ನಂಬಿಕೆಯಾಗಿದೆ.
ಐದು ದಿನಗಳ ಕಾಲ ನಿರಂತರವಾಗಿ ನಡೆಯುವ ಈ ಉತ್ಸವಕ್ಕೆ ಜನಸಾಗರವೇ ಹರಿದುಬರುತ್ತಿದ್ದು, ವಿವಿಧ ಸಂಘ-ಸಂಸ್ಥೆಗಳು ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಿವೆ ಎಂದರು.
ಮಾಜಿ ಸಚಿವ, ಸಮಾಜಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ. ಎಂ., ಟ್ರಸ್ಟಿಗಳಾದ ಚೌಟರ ಅರಮನೆಯ ಕುಲದೀಪ ಎಂ., ಶ್ರೀಪತಿ ಭಟ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ., ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷೆ ಜಯಶ್ರೀ ಅಮರನಾಥ್ ಶೆಟ್ಟಿ, ಕೆ. ಅಮರನಾಥ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಅಮರಶ್ರೀ ಅಮರಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕ ರಾಜಾರಾಮ್ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಾನೂನು ಸಲಹೆಗಾರ ಚೇತನ್ ಕುಮಾರ್ ಶೆಟ್ಟಿ ವಂದಿಸಿದರು.
