ದಾಯ್ಜಿವರ್ಲ್ಡ್ ಬೆಳ್ಳಿಹಬ್ಬ ಸಂಭ್ರಮ: ‘ನೇರ ದಾನಿಯಿಂದ ಫಲಾನುಭವಿಗೆ’ ತತ್ವವನ್ನು ಕೊಂಡಾಡಿದ ಡಾ. ರೊನಾಲ್ಡ್ ಕೊಲಾಸೊ


ಮಂಗಳೂರು, ಫೆ.15: “ಇಪ್ಪತ್ತೈದು ವರ್ಷಗಳ ಹಿಂದೆ ದಾಯ್ಜಿವರ್ಲ್ಡ್ ಅನ್ನು ನಾನು ಉದ್ಘಾಟಿಸಿದಾಗ, ಈ ಪ್ರದೇಶದಲ್ಲಿ ಇದು ವಿಶಿಷ್ಟ ಸುದ್ದಿವಾಹಿನಿ ವೆಬ್ ಪೋರ್ಟಲ್ ಆಗಿ ಪರಿಚಯವಾಗಿತ್ತು. ಆಗಿನಿಂದ ಇದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿ, ಕರಾವಳಿ ಭಾಗದಲ್ಲಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯ ಮಾಧ್ಯಮ ಸಂಸ್ಥೆಯಾಗಿ ಬೆಳೆದಿದೆ. ಸ್ಥಳೀಯ ಸುದ್ದಿಗಳಿಂದ ಜಾಗತಿಕ ಘಟನೆಗಳವರೆಗೆ ನಿಖರ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಈ ಪೋರ್ಟಲ್ ವಿಶಿಷ್ಟವಾಗಿದೆ,” ಎಂದು ಎನ್ಆರ್ಐ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಹೇಳಿದರು.

ಅವರು ಫೆಬ್ರವರಿ 14ರಂದು ಮಂಗಳೂರಿನ ಮಿಲಾಗ್ರಿಸ್ ಜ್ಯೂಬಿಲಿ ಹಾಲ್ ನಲ್ಲಿ ನಡೆದ ದಾಯ್ಜಿವರ್ಲ್ಡ್ ಸಂಸ್ಥೆಯ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.









































“ಸುದ್ದಿ ಪ್ರಸಾರಕ್ಕಷ್ಟೇ ಸೀಮಿತವಾಗದೇ, ದಾಯ್ಜಿವರ್ಲ್ಡ್ ಮಾನವೀಯ ಸೇವೆಯಲ್ಲೂ ತೊಡಗಿಸಿಕೊಂಡಿದೆ. ಅನೇಕ ವರ್ಷಗಳಿಂದ ದಾನಿಗಳ ಮತ್ತು ಅಗತ್ಯವಿರುವವರ ನಡುವೆ ಸೇತುವೆಯಾಗಿರುವ ಈ ಪೋರ್ಟಲ್ ‘ನೇರ ದಾನಿಯಿಂದ ಫಲಾನುಭವಿಗೆ’ ಎಂಬ ತತ್ವದಡಿ ವೈದ್ಯಕೀಯ, ಶಿಕ್ಷಣ ಹಾಗೂ ಸಾಮಾಜಿಕ ಕಾರಣಗಳಿಗೆ ಮಹತ್ವದ ಆರ್ಥಿಕ ನೆರವು ಒದಗಿಸಿದೆ. ಕಳೆದ 25 ವರ್ಷಗಳಲ್ಲಿ ರೂ. 35 ಕೋಟಿ ದೇಣಿಗೆ ಸಂಗ್ರಹಿಸಿ ನೇರವಾಗಿ ಅಗತ್ಯವಿರುವವರಿಗೆ ತಲುಪಿಸಿದೆ,” ಎಂದರು.

ಕೊವಿಡ್ ಮಹಾಮಾರಿಯ ಸಮಯದಲ್ಲಿ ‘ನಾವು ನಿಮ್ಮೊಂದಿಗೆ’  ಕಾರ್ಯಕ್ರಮದ ಮೂಲಕ ಆಹಾರ, ವೈದ್ಯಕೀಯ ಮತ್ತು ಮಾನಸಿಕ ನೆರವು ನೀಡಿದ ಸೇವೆಯನ್ನು ಅವರು ಸ್ಮರಿಸಿದರು. ಇತ್ತೀಚೆಗೆ ‘ಕ್ಯಾನ್ಸರ್ ಗೆಲ್ಲೋಣ’ ಕಾರ್ಯಕ್ರಮವನ್ನು ಪ್ರಾರಂಭಿಸಿ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದ ಬಗ್ಗೆ ಅವರು ಉಲ್ಲೇಖಿಸಿದರು. “ಕೇವಲ ಮೂರು ತಿಂಗಳಲ್ಲಿ ಅನೇಕರು ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಪ್ರಾರಂಭಿಕ ಜಾಗೃತಿ ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಮುಖ್ಯ,” ಎಂದರು.

“ಮಾಧ್ಯಮಗಳು ವಿಭಜನೆಯ ಸಂದೇಶಗಳಿಗಿಂತ ಸಮಾನತೆ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಿಸಲು ಸರ್ಕಾರ ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಸಾಮೂಹಿಕ ಏಕತೆಯಿಂದಲೇ ವೇಗವಾದ ಆರ್ಥಿಕ ಪ್ರಗತಿ ಸಾಧ್ಯ,” ಎಂದು ಡಾ. ಕೊಲಾಸೊ ಹೇಳಿದರು.

ಅವರು ಹಿಸ್ನಾ ಇಂಟರ್ನ್ಯಾಶನಲ್ ಸಂಸ್ಥೆಯ ರೊನಾಲ್ಡ್ ಪಿಂಟೊ ಅವರ ನಿರಂತರ ಬೆಂಬಲವನ್ನು ಶ್ಲಾಘಿಸಿದರು ಮತ್ತು ಸ್ಥಾಪಕ ವಾಲ್ಟರ್ ನಂದಳಿಕೆ ಅವರ ಪರಿಶ್ರಮವನ್ನು ಕೊಂಡಾಡಿದರು.

ಡಾ. ಪ್ರಕಾಶ್ ಶೆಟ್ಟಿ ಮಾತನಾಡಿ, “ವಾಲ್ಟರ್ ನಂದಳಿಕೆ ಜನರನ್ನು ಒಗ್ಗೂಡಿಸುವ ದೃಷ್ಟಿಯನ್ನು ಹೊಂದಿದ್ದು, ಇಂದು ದಾಯ್ಜಿವರ್ಲ್ಡ್ ಮಾಧ್ಯಮ ನೈತಿಕತೆ ಮತ್ತು ಕರಾವಳಿಯ ಸಂಸ್ಕೃತಿ, ಪ್ರವಾಸೋದ್ಯಮ ಪ್ರಚಾರದ ಮೂಲಕ ಮನೆಮಾತಾಗಿದೆ,” ಎಂದರು.

ಡಾ. ಯೆನೆಪೋಯ ಅಬ್ದುಲ್ ಕುಂಜ್ಙಿ ಅವರು ಮಾತನಾಡಿ “ಸರಳ ವೆಬ್ಪೇಜ್ ಆಗಿ ಆರಂಭವಾದ ದಾಯ್ಜಿವರ್ಲ್ಡ್ ಇಂದು ವಿಶ್ವಪ್ರಸಿದ್ಧ ಸುದ್ದಿಪೋರ್ಟಲ್ ಆಗಿ ಬೆಳೆಯಲು ವಾಲ್ಟರ್ ಅವರ ದೃಢಸಂಕಲ್ಪ ಕಾರಣ. ರೇಟಿಂಗ್ಗಾಗಿ ಪತ್ರಿಕಾ ನೈತಿಕತೆಯನ್ನು ಯಾವುದೇ ಸಂದರ್ಭದಲ್ಲೂ ಬಲಿಯಾಗಿಸಿಲ್ಲ,” ಎಂದು ಪ್ರಶಂಶಿಸಿದರು.

ಸ್ವಾಗತ ಭಾಷಣದಲ್ಲಿ ವಾಲ್ಟರ್ ನಂದಳಿಕೆ ಕೃತಜ್ಞತೆ ಸಲ್ಲಿಸಿ, “ಡಾ. ರೊನಾಲ್ಡ್ ಕೊಲಾಸೊ ಅವರ ಆಶೀರ್ವಾದದಿಂದ ಆರಂಭವಾದ ದಾಯ್ಜಿವರ್ಲ್ಡ್ ಇಂದು ಅವರ ಸಮ್ಮುಖದಲ್ಲೇ ರಜತ ಮಹೋತ್ಸವ ಆಚರಿಸುತ್ತಿರುವುದು ಸಂತೋಷಕರ. ಮುಂದೆಯೂ ಮಾಧ್ಯಮ ನೈತಿಕತೆಯನ್ನು ಕಾಪಾಡುತ್ತೇವೆ,” ಎಂದು ಭರವಸೆ ನೀಡಿದರು.

ವಿಶೇಷ ಅತಿಥಿಗಳಾಗಿ ರೋನಾಲ್ಡ್ ಪಿಂಟೋ (ಹಿಸ್ನಾ ಇಂಟರ್ನ್ಯಾಶನಲ್, ಯುಎಇ) ಮತ್ತು ಡಾ. ರೋಹನ್ ಮೊಂತೇರೊ ಉಪಸ್ಥಿತರಿದ್ದರು. ನಿರ್ದೇಶಕರಾದ ಮೆಲ್ವಿನ್ ರೊಡ್ರಿಗಸ್, ಅಲೆಕ್ಸಿಸ್ ಕ್ಯಾಸ್ಟೆಲಿನೋ, ನೆಲ್ಸನ್ ರೊಡ್ರಿಗ್ಸ್, ಲೀನಾ ವಿಕ್ಟರ್ ಡಿಸೋಜಾ, ಮೈಕೆಲ್ ಕ್ಯಾಸ್ಟೆಲಿನೋ, ಡಯಾನ್ ಡಿಸೋಜಾ, ರೋನಾಲ್ಡ್ ನಜರೆತ್ ಮತ್ತು ಸ್ಟೀವನ್ ಮಸ್ಕರೇನಸ್ ಉಪಸ್ಥಿತರಿದ್ದರು.

ಡಾ. ರೊನಾಲ್ಡ್ ಕೊಲಾಸೊ ಹಾಗೂ ರೋನಾಲ್ಡ್ ಪಿಂಟೋ ಅವರು ಪ್ರವೀಣ್ ತಾವ್ರೊ, ದಯಾನಂದ ಕುಕ್ಕಾಜೆ, ಸೋನಿಯಾ ಸುಧಾಕರ್, ನಂದಿನಿ ಮಲ್ಯ, ಆಲ್ವಿನ್ ಮಸ್ಕರೇನಸ್ ಮತ್ತು ಸ್ಟ್ಯಾನಿ ಬೇಳಾ ಅವರನ್ನು ಗೌರವಿಸಿದರು. ನಿರ್ದೇಶಕರು ಹಾಗೂ ಸಿಬ್ಬಂದಿ ವಾಲ್ಟರ್ ನಂದಳಿಕೆ ಅವರಿಗೆ ರಜತ ಮಹೋತ್ಸವ ಸ್ಮರಣಿಕೆ ಪ್ರದಾನಿಸಿದರು.

ಮೆಲ್ವಿನ್ ರೊಡ್ರಿಗಸ್ ವಂದಿಸಿದರು. ರೇನಾ ಕ್ಯಾಸ್ತೆಲಿನೋ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭವು ‘ಹಿಸ್ನಾ ಮಿಸ್ ದಾಯ್ಜಿವರ್ಲ್ಡ್’ ಗ್ರ್ಯಾಂಡ್ ಫಿನಾಲೆ ಹಾಗೂ ಪುತ್ತೂರಿನ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರದ ವಿದ್ಯಾರ್ಥಿಗಳ ಶಾಸ್ತ್ರೀಯ ನೃತ್ಯ ಪ್ರದರ್ಶನಗಳೊಂದಿಗೆ ಸಮಾಪ್ತಿಯಾಯಿತು.

Previous Post Next Post

Contact Form