ಜೈಪುರ, ಮೇ 14 : ಮಂಗಳವಾರ ಜೈಪುರದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಹೃದಯಾಂಶ್ (23 ತಿಂಗಳ ಮಗು) 17.50 ಕೋಟಿ ರೂಪಾಯಿ ಮೌಲ್ಯದ ಚುಚ್ಚುಮದ್ದನ್ನು ನೀಡಲಾಯಿತು.
ಆಸ್ಪತ್ರೆಯಲ್ಲಿನ ಅಪರೂಪದ ಕಾಯಿಲೆ ಘಟಕದ ಉಸ್ತುವಾರಿ ವೈದ್ಯಾಧಿಕಾರಿ ಪ್ರಿಯಾಂಶು ಮಾಥುರ್ ಮತ್ತು ಅವರ ತಂಡ ಅಮೆರಿಕದಿಂದ ಆಮದು ಮಾಡಿಕೊಳ್ಳಲಾದ ಝೋಲ್ ಜೆನೆಸ್ಮಾ ಚುಚ್ಚುಮದ್ದನ್ನು ನೀಡಿದರು.
ಹೃದಯಾಂಶ್ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕ್ರೌಡ್ ಫಂಡಿಂಗ್ ಮೂಲಕ ಬೃಹತ್ ನಿಧಿಯನ್ನು ಸಂಗ್ರಹಿಸಲು ಅವರ ಕುಟುಂಬವು ಅವಿರತ ಶ್ರಮಿಸಿತ್ತು.
ಹೃದಯಾಂಶ್ 6 ತಿಂಗಳು ತುಂಬಿದಾಗ ಅವರ ಹೆತ್ತವರಾದ ನರೇಶ್ ಶರ್ಮಾ ಮತ್ತು ಶಮಾ ಅವರಿಗೆ ಈ ಅಪರೂಪದ ಕಾಯಿಲೆಯ ಬಗ್ಗೆ ತಿಳಿಯಿತು. ನೊಂದ ಪೋಷಕರು ವೈದ್ಯರ ಬಳಿ ಕರೆದುಕೊಂಡು ಹೋಗಿ ಈ ಅಪರೂಪದ ಕಾಯಿಲೆ ಬಗ್ಗೆ ತಿಳಿದುಕೊಂಡಿದ್ದಾರೆ.
ಚುಚ್ಚುಮದ್ದು ನೀಡಿದ ನಂತರ ಮಗುವನ್ನು 24 ಗಂಟೆಗಳ ಕಾಲ ನಿಗಾ ಇಡಲಾಗುವುದು ಎಂದು ಡಾ.ಪ್ರಿಯಾಂಶು ಮಾಥುರ್ ಹೇಳಿದರು.
ಮಗುವಿನ ತಾಯಿಯ ಅಜ್ಜ ನರೇಶ್ ಕುಂಬಾಜ್ ಮಗುವಿಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದರು. ಹೃದಯಾಂಶ್ ಅವರ ಕುಟುಂಬವು ಚುಚ್ಚುಮದ್ದನ್ನು ಖರೀದಿಸಲು ಸಾಮಾಜಿಕ ಮಾಧ್ಯಮದಲ್ಲಿ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿತ್ತು.
ಭಾರತದ ಕ್ರಿಕೆಟಿಗರಾದ ದೀಪಕ್ ಚಾಹರ್ ಮತ್ತು ಸರ್ಫರಾಜ್ ಖಾನ್ ಕೂಡ ಮಗುವಿನ ಜೀವ ಉಳಿಸುವಂತೆ ಮನವಿ ಮಾಡಿದ್ದರು.