ಮೂಡುಬಿದಿರೆ: ಗಾಂಜಾ ಸಾಗಾಟದ ಬಗ್ಗೆ ಮಾಹಿತಿ ಪಡೆದ ಮೂಡುಬಿದಿರೆ ಸಿಂಗಂ ಎಂದೇ ಹೆಸರಾದ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಸಿನಿಮೀಯ ರೀತಿಯಲ್ಲಿ ರೌಡಿಶೀಟರ್ ಒಬ್ಬರನ್ನು ಸೆರೆಹಿಡಿದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಂಟ್ವಾಳ ಸ್ಟೇಶನ್ನಿನ
ರೌಡಿ ಶೀಟರ್ ಮೊಹಮ್ಮದ್ ತೌಸೀಫ್ ಬಂಧಿತ ಆರೋಪಿ. ಈತ ಮಂಗಳವಾರ ಶಿರ್ತಾಡಿಯಿಂದ ಬಿಳಿ ಬಣ್ಣದ ಕೆಎ
09 ಎಮ್‌ಜೆ 7034 ಹುಂಡೈ ವಾಹನದಲ್ಲಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಮೂಡುಬಿದಿರೆ ಇನ್ಸ್‌ಪೆಕ್ಟರ್
ಸಂದೇಶ್ ಪಿಜಿ ಅವರಿಗೆ ಮಾಹಿತಿ ಸಿಕ್ಕಿತ್ತು. ಕ್ಷಿಪ್ರವಾಗಿ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ
ಅವರು ಮೂಡುಬಿದಿರೆಯ ಕೊಡಂಗಲ್ಲು ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ.
ಆದರೆ ಆರೋಪಿ ಕಾರನ್ನು ವೇಗವಾಗಿ ಹಿಮ್ಮುಖವಾಗಿ ಚಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು,
ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು 2 ಪ್ಲಾಸ್ಟಿಕ್
ಕವರ್‌ಗಳಲ್ಲಿದ್ದ 10.8 ಗ್ರಾಂ ಎಂಡಿಎಂಎ ಗಾಂಜಾವನ್ನು ವಶಕ್ಕೆ ಪಡೆದಿದ್ದು, ವಾಹನದಲ್ಲಿ ಒಂದು ತಲವಾರು
ಕೂಡಾ ಪತ್ತೆಯಾಗಿದೆ.
ವಶಪಡಿಸಿಕೊಂಡ ಗಾಂಜಾದ ಮೌಲ್ಯ 50,000 ರೂ ಮತ್ತು ಕಾರಿನ ಅಂದಾಜು ಮೌಲ್ಯ 3 ಲಕ್ಷ ರೂಪಾಯಿ.
ಆರೋಪಿಯ ವಿರುದ್ಧ ವಿವಿಧ 5 ಪ್ರಕರಣಗಳೂ ಇವೆ. ಆರೋಪಿಯ ವಿರುದ್ಧ ಪೊಲೀಸರು ಎನ್‌ಡಿಪಿಎಸ್ ಮತ್ತು
ಶಸ್ತ್ರಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ , ಸಿಬ್ಬಂದಿಗಳಾದ ಮೊಹಮ್ಮದ್ ಹುಸೇನ್, ನಾಗರಾಜ್ ಲಮಾಣಿ, ಮೊಹಮ್ಮದ್ ಇಕ್ಬಾಲ್, ಅಖಿಲ್ ಅಹಮ್ಮದ್, ಚಂದ್ರಹಾಸ ರೈ ಮತ್ತು ದೇವರಾಜ್ ಅವರು ಪಾಲ್ಗೊಂಡಿದ್ದರು.