ಮೂಡುಬಿದಿರೆ: ಹೆದ್ದಾರಿ ನಿರ್ಮಾಣದ ವೇಳೆ ಅಜಾಗರೂಕತೆಯಿಂದ ರಸ್ತೆಗೆ ಸುರಿದಿದ್ದ ಜಲ್ಲಿಕಲ್ಲು ರಾಶಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಾಣೂರಿನಲ್ಲಿ ನಡೆದಿದೆ.
ಘಟನೆಯಲ್ಲಿ ಮೂಡುಬಿದಿರೆಯ ನಿವಾಸಿಗಳಾದ ತೇಜಸ್ ಮತ್ತು ಪ್ರಸಾದ್ ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬ್ರಹ್ಮಾವರದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಕಾರ್ಕಳ ಸಮೀಪದ ಸಾಣೂರು ಬಳಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಚಾಲಕ ನಿದ್ರೆಯ ಕೊರತೆಯಿಂದ ನಿದ್ದೆಗೆಟ್ಟು, ಜಲ್ಲಿಕಲ್ಲು ರಾಶಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಪರಿಣಾಮ ಪ್ರಯಾಣಿಕರೊಬ್ಬರಿಗೆ ತೀವ್ರ ಗಾಯಗಳಾಗಿವೆ.
ಸ್ಥಳಕ್ಕಾಗಮಿಸಿದ 108 ಆಂಬ್ಯುಲೆನ್ಸ್ ಪ್ರಥಮ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೂಡುಬಿದಿರೆಯ ಅಲಂಗಾರು ಮೌಂಟ್ ರೋಟರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
