ಮೂಡುಬಿದಿರೆ ಮೂಲದ ಬಿಷಪ್ ಫ್ರಾನ್ಸಿಸ್ ಸೆರಾವೋ, ಎಸ್.ಜೆ. (66) ಅವರನ್ನು ಮೈಸೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಪೋಪ್ 14ನೇ ಲಿಯೋ ಅವರು ನೇಮಿಸಿದ್ದಾರೆ. ಆಗಸ್ಟ್ 15, 2025 ರಂದು ಘೋಷಿಸಲಾದ ಈ ನೇಮಕಾತಿಯು ಬಿಷಪ್ ಸೆರಾವೋ ಅವರು ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಆಗಿ ಮತ್ತು ಸಿಸಿಬಿಐ ಎಕ್ಯುಮೆನಿಸಂ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಾಗ ಬಂದಿದೆ.
ಯೇಸು ಸಭೆಯ (ಜೆಸ್ಯೂಟ್) ಯಾಜಕರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ಅವರು ಆಗಸ್ಟ್ 15, 1959 ರಂದು ಮೂಡುಬಿದಿರೆಯಲ್ಲಿ ಜನಿಸಿದರು. ಜನವರಿ 3, 1979 ರಂದು ಬೆಂಗಳೂರಿನಲ್ಲಿ ಜೀಸಸ್ ಸೊಸೈಟಿಯನ್ನು ಪ್ರವೇಶಿಸಿದರು. ಅವರು ಏಪ್ರಿಲ್ 30, 1992 ರಂದು ಯಾಜಕ ದೀಕ್ಷೆಯನ್ನು ಪಡೆದರು. ಫ್ರಾನ್ಸಿಸ್ ಸೆರಾವೋ ಅವರನ್ನು ಮಾರ್ಚ್ 19, 2014 ರಂದು ಶಿವಮೊಗ್ಗದ ಬಿಷಪ್ ಆಗಿ ನೇಮಿಸಲಾಯಿತು ಮತ್ತು ಅದೇ ವರ್ಷ ಮೇ 7 ರಂದು ಬಿಷಪ್ ದೀಕ್ಷೆ ನೀಡಲಾಯಿತು.
ಕಾರವಾರ ಡಯಾಸಿಸ್‌ನ ಮುಂಡಗೋಡಿನಲ್ಲಿ ಯಾಜಕ ಸೇವೆಯನ್ನು ಪ್ರಾರಂಭಿಸಿದ ಅವರು, ನಂತರ ಮುಂಡಗೋಡಿನ ಲೊಯೊಲಾ ವಿಕಾಸ ಕೇಂದ್ರದಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದರು.
ನಂತರ ಅವರು ಬೆಂಗಳೂರಿನಲ್ಲಿ ಪ್ರಾದೇಶಿಕ ಥಿಯೋಲೊಗೇಟ್ ನಿರ್ದೇಶಕರಾಗುವುದರ ಜೊತೆಗೆ, ಆನೇಕಲ್‌ನಲ್ಲಿ ಸೇಂಟ್ ಜೋಸೆಫ್ ಚರ್ಚ್ ಅನ್ನು ಪ್ಯಾರಿಷ್ ಪ್ರೀಸ್ಟ್ ಆಗಿ ಮುನ್ನಡೆಸಿದರು, ಬಿಜಾಪುರದಲ್ಲಿ ಜೆಸ್ಯೂಟ್ ಸಮುದಾಯದ ಸುಪೀರಿಯರ್ ಆಗಿ ಸೇವೆ ಸಲ್ಲಿಸಿದರು ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಬಿಷಪ್ ಫ್ರಾನ್ಸಿಸ್ ಸೆರಾವೋ ಅವರು ಮೈಸೂರು ಧರ್ಮಪ್ರಾಂತ್ಯದ ಒಂಬತ್ತನೇ ಬಿಷಪ್ ಆಗಿದ್ದಾರೆ. 2024 ರಲ್ಲಿ ಮೈಸೂರು ಡಯಾಸಿಸ್ ಬಿಷಪ್ ಸ್ಥಾನ ತೆರವುಗೊಂಡಿದ್ದು, ಆರ್ಚ್‌ಬಿಷಪ್ ಬರ್ನಾರ್ಡ್ ಮೊರಾಸ್ ಅವರನ್ನು ಅದರ ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು.
ಮೈಸೂರು ಡಯಾಸಿಸ್ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಿದೆ. ಇದು 1,34,000 ಕ್ಯಾಥೋಲಿಕ್ ಜನಸಂಖ್ಯೆಯನ್ನು ಹೊಂದಿದ್ದು, 93 ಚರ್ಚ್, 140 ಡಯೋಸಿಸನ್ ಯಾಜಕರು, 108 ಧಾರ್ಮಿಕ ಯಾಜಕರು ಮತ್ತು 893 ಧಾರ್ಮಿಕ ಸಹೋದರಿಯರನ್ನು ಹೊಂದಿದೆ.