ಮೂಡುಬಿದಿರೆ ತಹಸೀಲ್ದಾರ್ ಕಚೇರಿಯಲ್ಲೀಗ 'ಬಕೆಟ್' ಭಾಗ್ಯ


ಜೈಸನ್ ತಾಕೊಡೆ

ಘೋಷಣೆ ಆದ ನಂತರವೂ ತಾಲೂಕು ’ಭಾಗ್ಯ’ ಕಳೆದುಕೊಂಡ ಮೂಡುಬಿದಿರೆ ತಾಲೂಕು ಶಾಪ ಮುಕ್ತವಾಗುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ.

ತಹಶೀಲ್ದಾರರ ಕಚೇರಿಯ ನೂತನ ಕಟ್ಟಡ ಉದ್ಘಾಟನೆಯಾಗಿ ಸುಮಾರು ೬ ತಿಂಗಳುಗಳು ಉರುಳಿದರೂ, ಹೊಸ ಕಟ್ಟಡಕ್ಕೆ ಮಾತ್ರ ಜನಸೇವೆಯ ’ಭಾಗ್ಯ’ ಇನ್ನೂ ಒದಗಿಬಂದಿಲ್ಲ. ಪರಿಣಾಮ ಮೂಡುಬಿದಿರೆ ತಹಶೀಲ್ದಾರ್ ಕಚೇರಿಯ ಸೋರುವ ಹಳೆಕಟ್ಟಡದಲ್ಲಿಯೇ ಅಮೂಲ್ಯ ಕಡತಗಳು ಮತ್ತು ದಾಖಲೆ ಪತ್ರಗಳು ಅಸುರಕ್ಷಿತವಾಗಿ ಉಳಿದುಬಿಟ್ಟಿವೆ.


’ಬಕೆಟ್ ಭಾಗ್ಯ’
ಜನವರಿಯಲ್ಲಿಯೇ ಹೊಸ ಕಟ್ಟಡ ಉದ್ಘಾಟನೆಯಾದರೂ, ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗದ ಪರಿಣಾಮ ಹೊಸ ಕಟ್ಟಡ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಹಾಗಾಗಿ ಸೋರುವ ಹಳೆ ಕಟ್ಟಡದ ದಾಖಲೆ ಪತ್ರ, ಕಡತಗಳನ್ನಿಡುವ ಕೋಣೆಯಲ್ಲಿ ಮಳೆನೀರು ತುಂಬದಂತೆ ’ಬಕೆಟ್ ಭಾಗ್ಯ’ಕ್ಕೆ ಚಾಲನೆ ಸಿಕ್ಕಿದೆ. ಕಳೆದ ವಾರ ತಹಶೀಲ್ದಾರ್ ಕಚೇರಿಯ ಹಳೆ ಕಟ್ಟಡದಲ್ಲಿ ಪರಿಶೀಲನೆ ನಡೆಸಿದಾಗ ಕೋಣೆಯ ತುಂಬೆಲ್ಲಾ ನೀರು ತುಂಬಿಕೊಂಡ ದೃಶ್ಯ ಕಾಣಸಿಕ್ಕಿತು.

ಈ ವ್ಯವಸ್ಥೆಯೊಳಗೆ ಸಾರ್ವಜನಿಕರ ಅಮೂಲ್ಯ ದಾಖಲೆಗಳು ಮತ್ತು ಕಡತಗಳು ಎಷ್ಟು ಸುರಕ್ಷಿತ ಎಂಬುದನ್ನು ಅಧಿಕಾರಿಗಳು ಮತ್ತು ನಾವೇ ಓಟು ಹಾಕಿ ಆರಿಸಿದ ಜನಪ್ರತಿನಿಧಿಗಳು ಉತ್ತರಿಸಬೇಕು.

ಸರಕಾರ, ಮೂಡುಬಿದಿರೆಯ ತಹಶೀಲ್ದಾರ್ ಕಚೇರಿಯತ್ತ ತೋರಿಸಿರುವ ಒಲವು ಸಾಲುತ್ತಿಲ್ಲ ಎಂಬುದು ಜನರ ಅಂಬೋಣ. ಏನೇ ಆಗಲಿ ಸಣ್ಣದಾದರೂ ಹೊಸ ಕಟ್ಟಡ ನಿರ್ಮಾಣ ಆಗಿದೆಯಲ್ಲಾ? ಅಗತ್ಯ ಕಡತ ದಾಖಲೆಪತ್ರ, ರೆಕಾರ್ಡ್ಸ್ ಇತ್ಯಾದಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ನಾಶವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಇಲಾಖೆ ಕೂಡಲೇ ಮನಸ್ಸು ಮಾಡಲಿ.
Previous Post Next Post

Contact Form