-ಜೈಸನ್ ತಾಕೊಡೆ
ಮೂಡುಬಿದಿರೆಯ ಅಲಂಗಾರಿನ ನಮ್ಮದೇ ಹುಡುಗ ನಿಹಾಲ್ ತಾವ್ರೊ ಹಾಡಿದ ಹಾಡಿನ ವೀಡಿಯೊ ಯುಟ್ಯೂಬ್‌ನಲ್ಲಿ ಇದೀಗ ಸಖತ್ ಹವಾ ಎಬ್ಬಿಸಿದೆ. ನಿಹಾಲ್ ತಾವ್ರೊ ಹಾಡಿದ ರುಸ್ತೊಮ್ ಚಿತ್ರದ ತೆರೇ ಸಂಗ್ ಯಾರಾ ಹಾಡಿನ ವೀಡಿಯೋವನ್ನು ಕೆಲವೇ ವಾರಗಳಲ್ಲಿ ಸುಮಾರು ಎರಡು ಲಕ್ಷದ ಎಪ್ಪತ್ತು ಸಾವಿರ ಜನ ವೀಕ್ಷಿಸಿದ್ದಾರೆ. ಹದಿಹರೆಯದ, ಚಿಗುರು ಮೀಸೆಯ ನಿಹಾಲ್ ತಾವ್ರೊ ಹಾಡಿಗೆ ಆನ್‌ಲೈನ್ ಜಗತ್ತೇ ನಿಬ್ಬೆರಗಾಗಿದೆ. ನಮ್ಮದೇ ಮೂಡುಬಿದಿರೆಯ ಹುಡುಗ ಸಂಗೀತ ಕ್ಷೇತ್ರದಲ್ಲಿ ಈ ಪರಿ ಸಾಧನೆ ಮಾಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ.
ತನ್ನ ಸುಮಧುರ ಕಂಠದಿಂದ ಲಕ್ಷಾಂತರ ಜನರನ್ನು ಸೆಳೆಯುತ್ತಿರುವ ನಿಹಾಲ್ ತಾವ್ರೊ ಮುಂದೊಂದು ದಿನ ಸಂಗೀತ ಜಗತ್ತಿನಲ್ಲಿ ಅಪ್ರತಿಮ ಸಾಧನೆ ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಅಕ್ಷಯ್ ಕುಮಾರ್ ಮತ್ತು ಇಲಿಯಾನಾ ಡಿಕ್ರುಝ್ ನಟನೆಯ ಟಿನು ಸುರೇಶ್ ದೆಸಾಯಿ ನಿರ್ದೇಶನದ ರುಸ್ತೊಮ್ ಚಿತ್ರದಲ್ಲಿ ಅತೀಫ್ ಅಸ್ಲಾಂ ಹಾಡಿದ ತೆರೇ ಸಂಗ್ ಯಾರಾ ಹಾಡಿನ ಸ್ಟುಡಿಯೋ ಕವರ್‌ನಲ್ಲಿ ನಮ್ಮ ನಿಹಾಲ್ ತಾವ್ರೊ ಹಾಡಿದ ವಿಡಿಯೋ ನೋಡಿದರೆ ನೀವೊಮ್ಮೆ ಆಶ್ಚರ್ಯಚಕಿತರಾಗುತ್ತೀರಿ. ಗುರುತಿಲ್ಲದಿದ್ದರೆ ಅದ್ಯಾವುದೋ ಪ್ರೊಫೆಶನಲ್ ಸಿಂಗರ್ ಹಾಡಿದ ಹಾಡು ಇರಬೇಕೆಂದುಕೊಳ್ಳುತ್ತೀರಿ...! ಅಷ್ಟರ ಮಟ್ಟಿಗೆ ಪ್ರೊಫೆಶನಲ್ ಆಗಿ ಹಾಡಿದ್ದಾರೆ ನಿಹಾಲ್ ತಾವ್ರೊ.
ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಹಾಲ್ ಅವರ ತಂದೆ ಹೆರಾಲ್ಡ್ ತಾವ್ರೊ ಯಾರಿಗೆ ಗೊತ್ತಿಲ್ಲ ಹೇಳಿ? ತುಳು ಕೊಂಕಣಿ ಹಾಡುಗಳ ರಚನಾಕಾರರಾಗಿ, ಬರಹಗಾರರಾಗಿ, ಗಾಯಕರಾಗಿ ಗಮನ ಸೆಳೆದಿರುವ ಹೆರಾಲ್ಡ್ ತಾವ್ರೊ ಅವರು ತುಳು ನಾಟಕರಂಗದಲ್ಲೂ ಸಂಗೀತಕಾರನಾಗಿ ಹೆಸರು ಮಾಡಿದವರು.
ಅಲಂಗಾರು ಚರ್ಚ್‌ನ ಗಾಯನ ಮಂಡಳಿಯಲ್ಲಿ ಕೋಯರ್ ಮೇಷ್ಟ್ರಾಗಿರುವ ಹೆರಾಲ್ಡ್ ತಾವ್ರೊ ಅವರೊಂದಿಗೆ ಚರ್ಚ್‌ಗೆ ಬರುತ್ತಿದ್ದ ನಿಹಾಲ್ ತಾವ್ರೊ ಮೂರನೇ ವರ್ಷದ ಪ್ರಾಯದಲ್ಲೇ ಸಂಗೀತದ ಗೀಳು ಹತ್ತಿಸಿಕೊಂಡಿದ್ದ. ತಂದೆಯಂತೆಯೇ ಮಗ ನಿಹಾಲ್ ಕೂಡಾ ಲೀಲಾಜಾಲವಾಗಿ ಕೀಬೋರ್ಡ್ ನುಡಿಸುತ್ತಾರೆ.
ಮೂಡುಬಿದಿರೆಯ ಜೈನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಾಮರ್ಸ್ ಓದುತ್ತಿರುವ ನಿಹಾಲ್ ಈಗಾಗಲೇ ನಮ್ಮ ಟಿವಿ ವಾಹಿನಿಯ ವಾಯ್ಸ್ ಆಫ್ ಉಡುಪಿ ಸ್ಪರ್ಧೆಯ ವಿಜೇತ, ವಿ4 ವಾಹಿನಿಯ ಫೋರಮ್ ಫಿಝಾ ಸೂಪರ್ ಸಿಂಗರ್ ಸ್ಪರ್ಧೆಯ ರನ್ನರ್‌ಅಪ್ ಆಗಿ ಮೂಡಿಬಂದ ಯುವಪ್ರತಿಭೆ. ಇದೀಗ ನಮ್ಮ ಟಿವಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಸೂಪರ್ ಸಿಂಗರ್ ಸಂಗೀತ ರಿಯಾಲಿಟಿ ಶೋನಲ್ಲಿ ಫೈನಲ್‌ಗೆ ಹತ್ತಿರ ಹತ್ತಿರ ತಲುಪಿದ್ದಾರೆ.
ನಿಹಾಲ್‌ಗೆ ಗಾಯನದ ಅಪ್ರತಿಮ ಪ್ರತಿಭೆಯಿದೆ. ಮುಂದೊಂದು ದಿನ ಅಲಂಗಾರಿನ ನಿಹಾಲ್ ತಾವ್ರೊ ಮೂಡುಬಿದಿರೆಗೆ ಕೀರ್ತಿಯ ಗರಿಯೇರಿಸುತ್ತಾರೆ ಎಂಬುದು ಖಂಡಿತಾ. ಆಲ್ ದಿ ಬೆಸ್ಟ್ ನಿಹಾಲ್.