ಬೆಂಗಳೂರು : ಪೊಲೀಸ್ ಇನ್ಸ್‌ಪೆಕ್ಟರ್ ಅವರ ಕಾರಿನ ಕಿಟಕಿ ಗಾಜನ್ನು ಒಡೆದು ಐವತ್ತು ಸಾವಿರ ರೂಪಾಯಿ ನಗದು, ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಮತ್ತು ಮೂರು ಪೆನ್‌ಡ್ರೈವ್‌ಗಳನ್ನು ಕಳ್ಳರು ಕಳವು ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರೇಸ್‌ಕೋರ್ಸ್ ರಸ್ತೆಯಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು.
| ಸಾಂದರ್ಭಿಕ ಚಿತ್ರ |
ನಗರದ ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಸಾಲಂಕೆ ಅವರು ಜನವರಿ 31ರಂದು ವೈಯುಕ್ತಿಕ ಕೆಲಸದ ನಿಮಿತ್ತ ಕೆಎ 53 ಎಮ್ಇ 5959 ಕಾರಿನಲ್ಲಿ ಆನಂದ ರಾವ್ ಸರ್ಕಲ್‌ಗೆ ಬಂದಿದ್ದು, ಸಂಜೆ 6 ಗಂಟೆ ಸುಮಾರಿಗೆ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಆಫೀಸಿನ ಗೇಟಿನ ಮುಂದೆ ಕಾರು ನಿಲ್ಲಿಸಿ ತೆರಳಿದ್ದರು.
7 ಗಂಟೆಯ ಸುಮಾರಿಗೆ ಹಿಂದಿರುಗಿ ಬಂದಾಗ ಯಾರೋ ಅವರ ಕಾರಿನ ಕಿಟಕಿಯ ಗಾಜನ್ನು ಒಡೆದಿರುವುದು ಅವರ ಗಮನಕ್ಕೆ ಬಂದಿದ್ದು ಈ ಬಗ್ಗೆ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.