ಮಂಗಳೂರು: ಟೀ ತರಲು ಹೋದ ಯುವತಿ ನಾಪತ್ತೆ

ಮಂಗಳೂರು: ಟೀ ತರಲು ಹೋಗಿದ್ದ 19ರ ಯುವತಿ ನಾಪತ್ತೆಯಾಗಿರುವ ಘಟನೆ ಏಪ್ರಿಲ್ 4ರಂದು ನಡೆದಿದೆ. ತುಮಕೂರಿನ, ಸಿರಾ ತಾಲೂಕಿನ ಕೆಂಚಪ್ಪನ ಹಳ್ಳಿಯ ಪ್ರೇಮಾ ಎಂಬಾಕೆ ನಾಪತ್ತೆಯಾದ ಯುವತಿ.


ಯುವತಿಯ ಸಂಬಂಧಿ ಲಕ್ಷ್ಮೀ ಎಂಬವರು ನೀಡಿದ ದೂರಿನ ಪ್ರಕಾರ ಲಕ್ಷ್ಮೀ ಅವರ ಪತಿ ಭಾಗಶಃ ಅಂಧರಾಗಿದ್ದು ಅವರು ಭಿಕ್ಷೆ ಬೇಡುತ್ತಿದ್ದು, ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯ ರೀಗಲ್ ಪ್ಲಾಝಾ ಲಾಡ್ಜ್ ನಲ್ಲಿ ವಾಸವಿದ್ದರು.

ಕಳೆದ ರವಿವಾರ ಅವರ ತಂಗಿಯ ಮಗಳು ಪ್ರೇಮಾ ಅವರೊಂದಿಗೆ ಮಂಗಳೂರಿಗೆ ಆಗಮಿಸಿದ್ದರು. ದಂಪತಿ ಭಿಕ್ಷೆ ಬೇಡಲು ತೆರಳುವಾಗ ನಾಪತ್ತೆಯಾದ ಪ್ರೇಮಾ ಅವರು ಲಾಡ್ಜ್ ನಲ್ಲಿಯೇ ಉಳಿದುಕೊಳ್ಳುತ್ತಿದ್ದಳು. ಏಪ್ರಿಲ್ 4ರಂದು ಸೋಮವಾರ ಬೆಳಿಗ್ಗೆ 7.15ಕ್ಕೆ ಟೀ ತರಲು ತೆರಳಿದ್ದ ಪ್ರೇಮಾ ಮಧ್ಯಾಹ್ನವಾದರೂ ವಾಪಾಸ್ ಬರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಕ್ಕಿಲ್ಲ. ತಂದೆ ತಾಯಿ ಇಲ್ಲದ್ದರಿಂದ ಲಕ್ಷ್ಮೀ ಅವರೇ ಪ್ರೇಮಾ ಅವರನ್ನು ನೋಡಿಕೊಳ್ಳುತ್ತಿದ್ದರು.

ನಾಪತ್ತೆಯಾದ ಪ್ರೇಮಾ ಅವರಿಗೆ ಓದಲು ಮತ್ತು ಬರೆಯಲು ತಿಳಿದಿಲ್ಲ. ರೂಮ್ ಬಿಟ್ಟು ತೆರಳುವಾಗ ಆಕೆ ಕೆಂಪು ಬಣ್ಣದ ಸಲ್ವಾರ್, ಕಪ್ಪು ಬಣ್ಣದ ವೇಲ್ ಮತ್ತು ಕಪ್ಪು ಬಣ್ಣದ ಚಪ್ಪಲಿ ಧರಿಸಿದ್ದಳು.

4.5 ಅಡಿ ಎತ್ತರವಿರುವ ಪ್ರೇಮಾ, ಕಡು ಬಣ್ಣದವರಾಗಿದ್ದು, ಅವರಿಗೆ ಬಲಗೈಯ ನಡುಬೆರಳು ಇಲ್ಲ.

Previous Post Next Post

Contact Form