ಮೂಡುಬಿದಿರೆ ಸ್ವರಾಜ್ಯ ಮೈದಾನದ ಸೆಲೂನಿನಲ್ಲಿ ಕಳವುಗೈದ ಆರೋಪಿ ಪತ್ತೆ


ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಗಣೇಶ್ ಭಂಡಾರಿ ಎಂಬವರಿಗೆ ಸೇರಿದ ಹೇರ್ ಕಟ್ಟಿಂಗ್ ಸೆಲೂನಿನಲ್ಲಿ ಕಳುವುಗೈದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ, ಆರೋಪಿಯಿಂದ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜನವರಿ 8 ರಾತ್ರಿ 10.15 ಗಂಟೆಯಿಂದ ಜನವರಿ 10ರ ಬೆಳಿಗ್ಗೆ 7.15ರ ಸಮಯದೊಳಗೆ ಯಾರೋ ಕಳ್ಳರು ಸ್ವರಾಜ್ಯ ಮೈದಾನದಲ್ಲಿ ಗಣೇಶ್ ಭಂಡಾರಿ ಎಂಬವರಿಗೆ ಸೇರಿದ ಹೇರ್ ಕಟ್ಟಿಂಗ್ ಸೆಲೂನಿನ ಹಿಂಬದಿ ಗೋಡೆಯನ್ನು ಕೊರೆದು ಕಿಂಡಿಯ ರೀತಿಯಲ್ಲಿ ಹೊಡೆದು ಅಂಗಡಿಯ ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ 40 ಇಂಚು ಅಗಲದ ಸೋನಿ ಎಲ್.ಇ.ಡಿ. ಟಿವಿ ಹಾಗೂ 1000 ರೂಪಾಯಿ ನಗದನ್ನು ಕಳುವುಗೈದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿ ಮತ್ತು ಸೊತ್ತು ಪತ್ತೆಯಲ್ಲಿದ್ದ ಮೂಡುಬಿದಿರೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಮೂಡುಬಿದಿರೆಯ ಪುಚ್ಚಮೊಗರು ಮಿತ್ತಬೈಲ್ ನಿವಾಸಿ ಹರೀಶ್ ಪೂಜಾರಿ (46) ಎಂಬಾತನನ್ನು ಬಂಧಿಸಿ ಆರೋಪಿಯಿಂದ ಕಳ್ಳತನಕ್ಕೆ ಉಪಯೋಗಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಹಾಗೂ ಸುಮಾರು 50,000 ರೂ ಮೌಲ್ಯದ 40 ಇಂಚು ಅಗಲದ ಸೋನಿ ಎಲ್.ಇ.ಡಿ. ಟಿವಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.


ಆರೋಪಿಯ ವಿರುದ್ಧ ಈ ಮೊದಲು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 2 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ, ಕದ್ರಿ ಪೊಲೀಸ್ ಠಾಣೆಯಲ್ಲಿ 5 ಕಳ್ಳತನ ಪ್ರಕರಣಗಳು, ಬರ್ಕೆ ಪೊಲೀಸ್ ಠಾಣೆಯಲ್ಲಿ 2 ಕಳ್ಳತನ ಪ್ರಕರಣಗಳು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ಹಾಗೂ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ಧಾರ್ಥ ಗೊಯಲ್, ಡಿಸಿಪಿ ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್  ಅವರ ನಿರ್ದೇಶನದಂತೆ, ಮೂಡುಬಿದಿರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಹಾಗೂ ಪೊಲೀಸ್ ಉಪ ನಿರೀಕ್ಷಕ ದಿವಾಕರ್ ರೈ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಹುಸೇನ್, ಆಕಿಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಮತ್ತು ಚಂದ್ರಹಾಸ ರೈ ಅವರು ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


x

Previous Post Next Post

Contact Form