ಮೂಡುಬಿದಿರೆ: ಬಾರಿನಿಂದ ಪಕ್ಕದಲ್ಲಿರುವ ತನ್ನ ಮನೆ ಮತ್ತು ಅಂಗಡಿಗೆ ಉಪಟಳ ಆಗುತ್ತಿರುವ ಬಗ್ಗೆ ದೂರಿದ ಸ್ಥಳೀಯರಿಗೆ ಬಾರ್ ಮಾಲಕ ರಾಡ್ನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ನಡೆದಿದೆ.
ಕಲ್ಲಬೆಟ್ಟುವಿನ ‘ಡೈನರ್ಸ್ ಡೆನ್’ ಬಾರ್ ಮಾಲಕ ಮನೋಜ್ ಹೆಗ್ಡೆ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ನಾರಾಯಣ ಪೂಜಾರಿ (52) ಎಂಬವರು ಹಲ್ಲೆಗೊಳಗಾದ ವ್ಯಕ್ತಿ.
ಕಲ್ಲಬೆಟ್ಟುವಿನಲ್ಲಿ ಮನೋಜ್ ಹೆಗ್ಡೆ ಅವರಿಗೆ ಸೇರಿದ ಬಾರ್ ಇದ್ದು, ಇದರಿಂದ ಪಕ್ಕದಲ್ಲಿ ಮನೆ ಮತ್ತು ಅಂಗಡಿ ಹೊಂದಿರುವ ನಾರಾಯಣ ಪೂಜಾರಿ ಅವರಿಗೆ ವಿಪರೀತ ತೊಂದರೆಯಾಗುತ್ತಿರುವ ಬಗ್ಗೆ ದೂರಿದ್ದರು. ಬಾರಿನವರಿಂದ ತಮ್ಮ ಪರಿಸರದಲ್ಲಿ ಸಿರಿಂಜ್, ಕಾಂಡೋಮ್, ಕಸ ಇತ್ಯಾದಿ ಬೀಳುತ್ತಿದ್ದು, ಡ್ರೆöÊನೇಜ್ ನೀರಿನಿಂದಲೂ ತೊಂದರೆ ಆಗುತ್ತಿರುವ ಬಗ್ಗೆ ನಾರಾಯಣ ಪೂಜಾರಿ ಅವರು ಸ್ಥಳೀಯ ಪುರಸಭಾ ಉಪಾಧ್ಯಕ್ಷೆಯವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.
ಪುರಸಭಾ ಆರೋಗ್ಯ ನಿರೀಕ್ಷಕರು ಕೂಡಾ ಈ ಹಿಂದೆ ಪರಿಶೀಲನೆ ನಡೆಸಿದ್ದು ಸಮಸ್ಯೆ ಪರಿಹಾರವಾಗಿರಲಿಲ್ಲ ಎನ್ನಲಾಗಿದೆ. ದಿನೇದಿನೇ ಉಪದ್ರವ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬಾರ್ ಉಸ್ತುವಾರಿ ನೋಡಿಕೊಳ್ಳುವ ಹರಿ ಎಂಬವರಿಗೆ ಫೋನ್ ಮಾಡಿ ತಿಳಿಸಿದಾಗ, ಬಾರ್ ಮಾಲಕ ಮನೋಜ್ ಅವರು ಫೋನ್ ತೆಗೆದುಕೊಂಡು ಅವ್ಯಾಚ್ಯವಾಗಿ ಬೈದು ‘ನೀನು ಎಲ್ಲಿದ್ದೀ? ಅಲ್ಲಿಗೆ ಬಂದು ನಿನಗೆ ಪಾಠ ಕಲಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ. ನಾರಾಯಣ ಅವರು ಅಂಗಡಿ ಮುಚ್ಚುವ ಸಿದ್ಧತೆಯಲ್ಲಿದ್ದಾಗ ಅಲ್ಲಿಗೆ ಕಬ್ಬಿಣದ ರಾಡ್ ಹಿಡಿದು ಬಂದ ಮನೋಜ್ ಹೆಗ್ಡೆ ಅವರು ನಾರಾಯಣ ಪೂಜಾರಿ ಅವರ ಅಂಗಡಿಯ ಗಾಜು ಒಡೆದಿದ್ದಾರೆ.
ಅಪಾಯವನ್ನರಿತ ನಾರಾಯಣ ಮನೆಗೆ ಓಡಿ ಹೆಂಡತಿಯನ್ನು ಕರೆದಿದ್ದು, ಗೇಟ್ ಮೂಲಕ ಮನೆ ಅಂಗಳಕ್ಕೆ ಬಂದ ಆರೋಪಿ ಹೆಂಡತಿಯನ್ನು ದೂಡಿ, ನಾರಾಯಣ ಅವರ ತಲೆ, ಕಿವಿಗೆ ರಾಡ್ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಾರಾಯಣ ಅವರು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.