ಮೂಡುಬಿದಿರೆ : ರಾಸಾಯನಿಕ ಪದಾರ್ಥವನ್ನು ಬಳಕೆ ಮಾಡಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆ ಮಾರುಕಟ್ಟೆಗೆ ಜಿಲ್ಲಾ ಆಹಾರ ಅಧಿಕಾರಿಗಳ ನೇತೃತ್ವದ ತಂಡ ಶುಕ್ರವಾರ ದಾಳಿ ನಡೆಸಿ ಮಾವಿನ ಹಣ್ಣುಗಳನ್ನು ಪರಿಶೀಲನೆ ನಡೆಸಿತು.
ವಾರದ ಸಂತೆ ದಿನವಾದ ಶುಕ್ರವಾರ ಮಾರುಕಟ್ಟೆ, ಮುಖ್ಯ ರಸ್ತೆ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ತೆರೆದ ವಾಹನಗಳಲ್ಲಿ ವಿವಿಧ ಬಣ್ಣಗಳ ಮಾವಿನ ಹಣ್ಣುಗಳನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಮಾವಿನ ಹಣ್ಣುಗಳ ಬಾಕ್ಸ್ನಲ್ಲಿ ಎಥಿಲೀನ್ ರಾಸಾಯನಿಕ ಪೌಡರ್ ಪ್ಯಾಕೆಟ್‌ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇವು ಮಾವಿನಕಾಯಿಯನ್ನು ಕೃತಕವಾಗಿ ಬಹುಬೇಗನೆ ಹಣ್ಣು ಮಾಡಲು ಬಳಸುವ ರಾಸಾಯನಿಕ ಪದಾರ್ಥ ಎನ್ನಲಾಗಿದೆ.
`ಕೆಮಿಕಲ್ ಮಿಶ್ರಿತ ಇಂತಹ ಮಾವುಗಳನ್ನು ಮಾರಾಟ ಮಾಡುವುದು ಅಪರಾಧವಾಗಿದೆ. ನಿಮ್ಮ ವಾಹನಗಳನ್ನು ಇಲ್ಲಿಂದ ತೆರವುಗೊಳಿಸಬೇಕು' ಎಂದು ಆರೋಗ್ಯಾಧಿಕಾರಿಗಳು ವ್ಯಾಪಾರಿಗಳಿಗೆ ಸೂಚಿಸಿದರು. ಮಂಗಳೂರಿಗೆ ಬರುವ ಮಾವಿನ ಹಣ್ಣುಗಳನ್ನು ನಾವು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದೇವೆ. ನಾವು ಕೆಮಿಕಲ್ ಮಿಶ್ರಣ ಮಾಡಿಲ್ಲ. ವ್ಯಾಪಾರ ತೆರವುಗೊಳಿಸಿದರೆ ನಮಗೆ ನಷ್ಟ ಆಗುತ್ತದೆ ಎಂದು ವ್ಯಾಪಾರಿಗಳು ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡರು. ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಹಲವು ಹೊತ್ತು ಚರ್ಚೆ ನಡೆಯಿತು. ಕೊನೆಗೆ ಪೊಲೀಸರು ಬಂದು ಎಚ್ಚರಿಸಿದರು. ವ್ಯಾಪಾರಿಗಳು ಅಂಗಡಿ ತೆರವುಗೊಳಿಸದೆ ಎಂದಿನAತೆ ಸಾಯಂಕಾಲದವರೆಗೆ ವ್ಯಾಪಾರಿಗಳು ಮಾವುಗಳನ್ನು ಮಾರಾಟ ಮಾಡಿದ ಬಳಿಕ ಅಲ್ಲಿಂದ ಹೊರಟು ಹೋಗಿದ್ದಾರೆ. ವಾಹನಗಳ ನೋಂದಾವಣಿ ಸಂಖ್ಯೆಯಗಳನ್ನು ಅಧಿಕಾರಿಗಳು ಪಡಕೊಂಡಿದ್ದಾರೆ. ಜಿಲ್ಲಾ ಆಹಾರ ಅಧಿಕಾರಿ ಡಾ.ಪ್ರವೀಣ್, ಮೂಡುಬಿದಿರೆ ಪುರಸಭೆ ಆರೋಗ್ಯ ನಿರೀಕ್ಷಕಿ ಶಶಿರೇಖಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ನಟರಾಜ್ ಕರ‍್ಯಾಚರಣೆಯಲ್ಲಿದ್ದರು.