ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ: ತಾಯಿ ಮಗು ಮೃತ್ಯು


ಮುಂಬಯಿ: ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಗರ್ಭಿಣಿ ಮತ್ತು ಮಗು ಮೃತಪಟ್ಟ ಧಾರುಣ ಘಟನೆ ಮುಂಬಯಿಯಲ್ಲಿ ನಡೆದಿದೆ.

ವಿಕಲಚೇತನರಾದ ಖುಸ್ರುದ್ದೀನ್ ಅನ್ಸಾರಿ ಅವರು ತಮ್ಮ ಪತ್ನಿ ಸಾಹಿದ್ದೂನ್ (26ವ) ಅವರನ್ನು ಹೆರಿಗೆಗಾಗಿ ಸುಷ್ಮಾ ಸ್ವರಾಜ್ ಹೆರಿಗೆ ಆಸ್ಪತ್ರೆಗೆ ಕರೆತಂದಿದ್ದರು. ದಂಪತಿ 11 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

ಹೆರಿಗೆಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕರೆಂಟ್ ಹೋಗಿದ್ದು, ಸುಮಾರು 3 ಗಂಟೆಗಳ ಕಾಲ ಜನರೇಟರ್ ಕೂಡಾ ಹಾಕಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತಾಯಿ ಮಗು ಸಾವನ್ನಪ್ಪಿದ್ದರೂ ಕೂಡಾ, ವೈದ್ಯರು ಕತ್ತಲಲ್ಲೇ ಇನ್ನೊಂದು ಹೆರಿಗೆಯನ್ನು ಮಾಡಿದ್ದಾರೆ ಎನ್ನಲಾಗಿದೆ.

ಕುಟುಂಬದ ಸದಸ್ಯರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದು, ಕೊನೆಗೂ ಬೃಹನ್ಮುಂಬಯಿ ಮಹಾನಗರ ಪಾಲಿಗೆ ತನಿಖೆಗೆ ಆದೇಶಿಸಿದೆ.

‘ತಾಯಿ 9 ತಿಂಗಳ ಗರ್ಭಿಣಿಯಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದರು. ಎಲ್ಲಾ ರಿಪೋರ್ಟ್‍ಗಳು ಸರಿಯಾಗಿದ್ದರು. ಏಪ್ರಿಲ್ 29ರಂದು ಬೆಳಿಗ್ಗೆ 7 ಗಂಟೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದರೂ ಸಂಜೆಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ನಾರ್ಮಲ್ ಹೆರಿಗೆ ಆಗುವ ಬಗ್ಗೆ ವೈದ್ಯರು ತಿಳಿಸಿದ್ದರು. ರಾತ್ರಿ 8 ಗಂಟೆಗೆ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದು, ಕರೆಂಟ್ ಹೋದರೂ ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಹೇಳಿಲ್ಲ.’ ಎಂದು ಮೃತ ಮಹಿಳೆಯ ಅತ್ತೆ ಆರೋಪಿಸಿದ್ದಾರೆ.

ಕರೆಂಟ್ ಹೋಗಿದ್ದರೂ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಹೆರಿಗೆ ಮಾಡಿದ್ದು ಹೆರಿಗೆಯ ಸಂದರ್ಭದಲ್ಲಿ ಮಗು ಮೃತಪಟ್ಟಿದೆ. ಕೊನೆಗೆ ತಾಯಿಯನ್ನು ಸಾಯನ್‍ನ ಆಸ್ಪತ್ರೆಗೆ ವರ್ಗಾಯಿಸುವಂತೆ ಹೇಳಿದ್ದು, ಅಷ್ಟರಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ. ಕನಿಷ್ಟ ಆಮ್ಲಜನಕದ ವ್ಯವಸ್ಥೆ ಕೂಡಾ ಇರಲಿಲ್ಲ ಎನ್ನಲಾಗಿದೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. (NDTV)

Previous Post Next Post

Contact Form