ಮೂಡುಬಿದಿರೆ: ಭಾರೀ ಮಳೆಯಿಂದಾಗಿ ಮೂಡುಬಿದಿರೆಯ ಗುಂಡ್ಯಡ್ಕದಲ್ಲಿ ಶನಿವಾರ ನಸುಕಿನ ಜಾವ ಗುಡ್ಡ ಕುಸಿದು ಪಾಲಡ್ಕ-ಕಲ್ಲಮುಂಡ್ಕೂರು ಸಂಪರ್ಕ ರಸ್ತೆ ಬಂದ್ ಆಗಿದೆ.
ಸುದ್ದಿ ತಿಳಿದು ಪಾಲಡ್ಕ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಸಿಕ್ಷೇರಾ ಅವರು ಜೆಸಿಬಿ ತರಿಸಿ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಸಂದರ್ಭ ಮತ್ತೆ ಗುಡ್ಡ ಜರಿದಿದೆ.
ಗುಡ್ಡದಿಂದ ಮಣ್ಣು ಹಾಗೂ ಬಂಡೆಕಲ್ಲು ಸಮೇತ ಜಾರಿಬಿದ್ದರೂ ಬಂಡೆಕಲ್ಲು ಗುಡ್ಡದ ಅರ್ಧದಲ್ಲಿ ನಿಂತಿದ್ದರೆ ಮಣ್ಣು ಜೆಸಿಬಿ ಮೇಲೆ ಬಿದ್ದು ಜೆಸಿಬಿಯನ್ನು ಒಂದಷ್ಟು ದೂರಕ್ಕೆ ತಳ್ಳಿಕೊಂಡು ಹೋಗಿತ್ತು. ಜೆಸಿಬಿ ಚಾಲಕ ಹಾಗೂ ಸಹಾಯಕ ಅಪಾಯದಿಂದ ಪಾರಾಗಿದ್ದಾರೆ. ನಂತರ ಇನ್ನೊಂದು ಜೆಸಿಬಿಯನ್ನು ತರಿಸಿ ಮೊದಲ ಜೆಸಿಬಿಯನ್ನು ಮೇಲಕ್ಕೆ ತರಲಾಯಿತು.
ಗುಡ್ಡದ ಕೆಳಭಾಗದಲ್ಲಿ ಮೂರು ವಾಸ್ತವ್ಯದ ಮನೆಗಳಿದ್ದು ಪುತ್ತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ್ ಮುನ್ನೆಚ್ಚರಿಕೆ ಕ್ರಮವಾಗಿ ವಿಜಿತ್ , ವಿನ್ಸೆಂಟ್ ಸಿಕ್ಷೇರಾ ಮತ್ತು ಸಿಸಿಲಿಯಾ ಅವರ ಕುಟುಂಬಗಳ ಸ್ಥಳಾಂತರಕ್ಕೆ ಸೂಚಿಸಿದ್ದಾರೆ.
ಗುಡ್ಡದಿಂದ ಮತ್ತೆ ಮಣ್ಣು ಜರಿಯುವ ಅಪಾಯವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪಾಲಡ್ಕ-ಕಲ್ಲಮುಂಡ್ಕೂರು ಸಂಪರ್ಕ ರಸ್ತೆಯನ್ನು ತಹಶಿಲ್ದಾರ್ ಪ್ರದೀಪ್ ಹುರ್ಡೇಕರ್ ಮುಂದಿನ ಆದೇಶದವರೆಗೆ ಬಂದ್ ಮಾಡಿಸಿದ್ದಾರೆ. ಈ ರಸ್ತೆಯಲ್ಲಿ ವಾಹನ ಮಾತ್ರವಲ್ಲದೆ ಸಾರ್ವಜನಿಕರ ಓಡಾಟಕ್ಕೂ ನಿರ್ಬಂಧ ಹೇರಲಾಗಿದೆ.
ಪರಿಸರದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಕಂದಾಯ ನಿರೀಕ್ಷಕ ಮಂಜುನಾಥ, ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಮೆಸ್ಕಾಂ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.