ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾದ ಸಂಸದ ಬ್ರಿಜೇಶ್ ಚೌಟ


ಹೊಸದಿಲ್ಲಿ: ದಕ್ಷಿಣ ಕನ್ನಡದ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸವಾಲುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಸೂಕ್ತ ತಪಾಸಣೆ ಇಲ್ಲದೆ ಹೊರ ರಾಜ್ಯಗಳಿಂದ ಅಡಕೆ ಆಮದು ಮಾಡಿಕೊಳ್ಳುವುದರಿಂದ ಈ ಭಾಗದ ಅಡಿಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅನ್ಯಾಯದ ಬೆಲೆ ಪೈಪೋಟಿಗೆ ಕಾರಣವಾಗಿದ್ದು, ಸ್ಥಳೀಯ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಮಾರುಕಟ್ಟೆ ಬೆಲೆಯನ್ನು ಪಡೆಯುವುದು ಕಷ್ಟಕರವಾಗಿದೆ. ದೇಶೀಯ ರೈತರಿಗೆ ಸ್ಥಿರವಾದ ಮಾರುಕಟ್ಟೆ ದರವನ್ನು ಖಚಿತಪಡಿಸಿಕೊಳ್ಳಲು ಅಡಿಕೆ ಆಮದಿನ ಮೇಲೆ ಕಟ್ಟುನಿಟ್ಟಾದ ನಿಯಂತ್ರಣವನ್ನು ವಿಧಿಸಲು ಚೌಟ ಸಚಿವರನ್ನು ಒತ್ತಾಯಿಸಿದರು.

ಅಡಿಕೆ ಬೆಳೆಗಳಲ್ಲಿ ಕೊಳೆತ ಮತ್ತು ಎಲೆ ಚುಕ್ಕೆಗಳಂತಹ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡದ ರೈತರು ಗಮನಾರ್ಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪರ್ಯಾಯ ಬೆಳೆಯಾಗಿ ಕಾಫಿ ಕೃಷಿಯನ್ನು ಉತ್ತೇಜಿಸಲು ಕ್ರಮಕೈಗೊಳ್ಳುವಂತೆ ಚೌಟ ಸಚಿವರಿಗೆ ಮನವಿ ಮಾಡಿದರು.

ದಕ್ಷಿಣ ಕನ್ನಡದಲ್ಲಿ ಕಾಫಿ ಕೃಷಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕಾಫಿ ಮಂಡಳಿ ನಡೆಸಿದ ಸಮೀಕ್ಷೆಯನ್ನು ಎತ್ತಿ ಹಿಡಿದ ಅವರು, ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದಾಗಿ ಸಚಿವರಿಗೆ ತಿಳಿಸಿದರು. ಕಾಫಿ ರೈತರನ್ನು ಮತ್ತಷ್ಟು ಬೆಂಬಲಿಸಲು ಮತ್ತು ಬೆಳೆಯ ಸಾಮರ್ಥ್ಯದ ಬಗ್ಗೆ ಅರಿವು ಹೆಚ್ಚಿಸಲು, ಮಂಗಳೂರಿನಲ್ಲಿ ಕಾಫಿ ಮಂಡಳಿಗೆ ಕಚೇರಿ ಸ್ಥಾಪಿಸಲು ನಿರ್ದೇಶನ ನೀಡಬೇಕೆಂದು ಅವರು ಸಚಿವರನ್ನು ಒತ್ತಾಯಿಸಿದರು.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ದಕ್ಷಿಣ ಕನ್ನಡಕ್ಕೆ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ‘ಬ್ಯಾಕ್ ಟು ವಿಲೇಜ್’ಅಭಿಯಾನ ಸೇರಿದಂತೆ ಕ್ಯಾ| ಬ್ರಿಜೇಶ್ ಚೌಟ ಅವರ ಉಪಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ರೈತರು ಮತ್ತು ಸ್ಥಳೀಯ ಆರ್ಥಿಕತೆಗೆ ಅನುಕೂಲವಾಗುವ ನವೀನ ಆಲೋಚನೆಗಳನ್ನು ಉತ್ತೇಜಿಸಲು ಸಚಿವರು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

Previous Post Next Post

Contact Form