ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತಾನು ವಾಸವಿದ್ದ ಕೊಠಡಿಯಲ್ಲಿಯೇ ಫ್ಯಾನಿಗೆ ಬೆಡ್‌ಶೀಟ್ ಬಿಗಿದು ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ವಿದ್ಯಾರ್ಥಿಯನ್ನು ಬೆಳಗಾವಿ ಕೆಎಲ್‌ಐ ರಸ್ತೆ ನೆಹರುನಗರ ನಿವಾಸಿ ವಿನಾಯಕ ಟಿ ಮಿಸಾಳ ಅವರ ಪುತ್ರ ಸೂರ್ಯಂ ವಿನಾಯಕ ಮಿಸಾಳ (17) ಎಂದು ಗುರುತಿಸಲಾಗಿದೆ.
![]() |
ಡೆತ್‌ನೋಟ್ |
ಬೆಳಗಾವಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ ಮೃತ ವಿದ್ಯಾರ್ಥಿ ತನ್ನ ತಾಯಿಗೆ ಭಾವನಾತ್ಮಕವಾದ ಡೆತ್‌ನೋಟ್ ಬರೆದಿಟ್ಟಿದ್ದು ಅದರಲ್ಲಿ 'ದಯಮಾಡಿ ನನ್ನನ್ನು ಕ್ಷಮಿಸಿ, ಯಾವುದೇ ಕಾರಣಕ್ಕೂ ತಾನು ಪ್ರೀತಿಸಿದ ಹುಡುಗಿಗೆ ಬೈಯ್ಯಬೇಡಿ. ನನಗಾಗಿ ಅಳಬಾಡಿ' ಎಂದು ಉಲ್ಲೇಖಿಸಿದ್ದಾನೆ.
ವಿದ್ಯಾರ್ಥಿಯು ಕಲ್ಲಬೆಟ್ಟು ಗ್ರಾಮದ ವರದ ರಾಜ್ ಭಟ್ ಎಂಬುವರಿಗೆ ಸೇರಿದ ಮನೆಯ ರೂಮಿನಲ್ಲಿ ವಾಸ್ತವ್ಯವಿದ್ದ ಎನ್ನಲಾಗಿದೆ. ಪ್ರೇಮ ವೈಫಲ್ಯದಿಂದ ಮನನೊಂದಿದ್ದ ಈತ ಮಂಗಳವಾರ ಕಾಲೇಜಿಗೆ ಹೋಗದೆ ಬಾಡಿಗೆ ಕೋಣೆಯಲ್ಲಿಯೇ ಉಳಿದುಕೊಂಡಿದ್ದು ಮಂಗಳವಾರ ಸಂಜೆ ಆತ್ಮಹತ್ಯೆಯ ಘಟನೆ ಬೆಳಕಿಗೆ ಬಂದಿದೆ.
ಮೂಡುಬಿದಿರೆ ಠಾಣಾಧಿಕಾರಿ ಸಂದೇಶ್ ಪಿ.ಜಿ. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ನ್ಯೂ ವೈಬ್ರೆಂಟ್ ಕಾಲೇಜಿಗೆ ಜವಾಬ್ದಾರಿ ಇಲ್ಲವೇ?
ಹದಿಹರೆಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಇರುವಂತೆ ಕಡ್ಡಾಯ ಮಾಡದೆ ಬಾಡಿಗೆ ಕೋಣೆಯಲ್ಲಿ ಇರಲು ಬಿಟ್ಟಿರುವ ನ್ಯೂ ವೈಬ್ರೆಂಟ್ ಕಾಲೇಜಿನ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಕಾಲೇಜಿಗೆ ಸೂಕ್ತ ಹಾಸ್ಟೆಲ್ ವ್ಯವಸ್ಥೆ ಇಲ್ಲದೆ ಮೂಡುಬಿದಿರೆ ನಗರದ ಹಲವೆಡೆ ಖಾಸಗಿ ಕಟ್ಟಡಗಳಲ್ಲಿ ವಿದ್ಯಾರ್ಥಿಗಳ ವಾಸಕ್ಕೆ ಏರ್ಪಾಡು ಮಾಡಲಾಗುತ್ತಿತ್ತು ಎನ್ನಲಾಗಿದೆ. ಕಾಲೇಜಿಗೆ ಲಕ್ಷಾಂತರ ರೂಪಾಯಿ ಪೀಸು ಕಟ್ಟಿಸಿಕೊಳ್ಳುವ ಜೊತೆಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲವೇ? ಮೊದಲೇ ಪ್ರೇಮ ವೈಫಲ್ಯದಿಂದ ಖಿನ್ನತೆಯಲ್ಲಿದ್ದ ವಿದ್ಯಾರ್ಥಿಯನ್ನು ಸೂಕ್ತ ಭದ್ರತೆ, ವಾರ್ಡನ್‌ಗಳಿಲ್ಲದ ಅನಧಿಕೃತ ಪಿಜಿಯಂತಿದ್ದ ಕೋಣೆಯಲ್ಲಿರಲು ಬಿಟ್ಟಿರುವುದೇಕೆ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
::::::::::::::