ಮೂಡುಬಿದಿರೆ : ಶಿಕ್ಷಣವನ್ನು ವಿದ್ಯಾರ್ಥಿಗಳು, ಪೋಷಕರು ಗಂಭೀರವಾಗಿ ತೆಗೆದುಕೊಳ್ಳಬೇಕು. ಪೋಷಕರು ಮಕ್ಕಳಲ್ಲಿರುವ ಬುದ್ದಿಮತ್ತೆಯನ್ನು ಗಮನಿಸಿ ಅದಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಆಡಳಿತ ಮಂಡಳಿ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ, ಸಾಧನಾ - ಸ್ಪಂದನ ಯುವ ಕಲಾ ರಂಗ, ಗುರುಕಾಷ್ಠಶಿಲ್ಪ ಸಮಿತಿ ವತಿಯಿಂದ ಭಾನುವಾರ ವಿಶ್ವಕರ್ಮ ಸಭಾಭವನದಲ್ಲಿ ನಡೆದ ಶಿಕ್ಷಣ ಮಾಹಿತಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ನಿಟ್ಟೆ ಪರಿಗಣಿತ ವಿವಿಯ ಪ್ರೊ. ಡಾ. ಸುಧೀರ್‌ರಾಜ್ ಕೆ., ಉಪನ್ಯಾಸಕ ಹರ್ಷವರ್ಧನ ನಿಟ್ಟೆ, ಖ್ಯಾತ ವಾಗ್ಮಿ ಎನ್. ಆರ್. ದಾಮೋದರ ಶರ್ಮ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ, ಮೊಕ್ತೇಸರರಾದ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಗುರುಕಾಷ್ಠಶಿಲ್ಪ ಸಮಿತಿಯ ಅಧ್ಯಕ್ಷ ಜಗದೀಶ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲ ಸೀತಾರಾಮ ಆಚಾರ್ಯ, ಸೇವಾ ಸಮಿತಿಯ ಉಪಾಧ್ಯಕ್ಷ ಭಾಸ್ಕರ ಆಚಾರ್ಯ, ಇಂಜಿನಿಯರ್ ಗಂಗಾಧರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಯೋಜಕ ಜಿ. ಎಸ್. ಪುರಂದರ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಶ್ರೀ ತಾಕೋಡೆ ಕಾರ್ಯಕ್ರಮ ನಿರ್ವಹಿಸಿದರು.