ಮೂಡುಬಿದಿರೆ ಪೊಲೀಸರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ


ಮೂಡುಬಿದಿರೆ: ಇದೊಂದು ವಿಶೇಷ ಪ್ರಕರಣ. ಕಳೆದು ಹೋದ ಚಿನ್ನದ ಜಾಡು ಹಿಡಿದ ಪೊಲೀಸರು ಎರಡೇ ದಿನಗಳಲ್ಲಿ ಚಿನ್ನವನ್ನು ಪತ್ತೆಹಚ್ಚಿ ವಾರಾಸುದಾರರಿಗೆ ಮರಳಿಸಿದ್ದಾರೆ. ಪತ್ತೆ ಹಚ್ಚಿದ ಚಿನ್ನದ ಮೌಲ್ಯ ಸುಮಾರು ಹತ್ತು ಲಕ್ಷ...! ಹೌದು ಮೂಡುಬಿದಿರೆ ಪೊಲೀಸರು ಹೀಗೊಂದು ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆದಿದ್ದಾರೆ. 

ಅಂತ್ಯಕ್ರಿಯೆಯಿಂದ ಹಿಂತಿರುಗುವಾಗ ಕಳೆದುಕೊಂಡಿದ್ದ ಹತ್ತು ಲಕ್ಷ ಮೌಲ್ಯದ ಒಂಭತ್ತು ಪವನ್ ಚಿನ್ನವನ್ನು ಮೂಡುಬಿದಿರೆ ಪೊಲೀಸರು ಪತ್ತೆಹಚ್ಚಿ ವಾರಾಸುದಾರರಿಗೆ ಮರಳಿಸಿದ್ದಾರೆ.

ಶುಕ್ರವಾರದಂದು ಕುಪ್ಪೆಪದವಿನಲ್ಲಿ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುವಾಗ ಪಡುಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರ ಪತ್ನಿ ವಿಜಯ ಅವರು ಮಧ್ಯಾಹ್ನ ಮೂಡುಬಿದಿರೆ ಪೇಟೆಯಲ್ಲಿ ಚಿನ್ನವನ್ನು ಕಳೆದುಕೊಂಡಿದ್ದರು. ಪರ್ಸ್ ಜೊತೆ ಒಟ್ಟು ಒಂಭತ್ತು ಪವನ್ ತೂಕದ ಎರಡು ಬಳೆ ಮತ್ತು ಚಿನ್ನದ ಸರ ಕಳೆದುಕೊಂಡಿದ್ದು, ಅದೇ ದಿನ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರಿನ ಅನ್ವಯ ಶೀಘ್ರ ಪತ್ತೆ ಕಾರ್ಯದಲ್ಲಿ ತೊಡಗಿದ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ ಜಿ  ನೇತೃತ್ವದ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಮಹಮದ್ ಹುಸೇನ್, ಮಹಮದ್ ಇಕ್ಬಾಲ್, ಅಖಿಲ್ ಅಹಮದ್, ನಾಗರಾಜ ಲಮಾಣಿ ಮತ್ತು ವೆಂಕಟೇಶ್‌ರವರು ಎರಡೇ ದಿನಗಳಲ್ಲಿ ಕಳೆದುಹೋದ ಚಿನ್ನವನ್ನು ಪತ್ತೆ ಹಚ್ಚಿ  ವಾರಸುದಾರರಿಗೆ ಹಸ್ತಾಂತರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Previous Post Next Post

Contact Form