ಮೂಡುಬಿದಿರೆ: ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ



ಮೂಡುಬಿದಿರೆ: ಇಲ್ಲಿನ ಮಾರೂರಿನ ಜೈ ಭವಾನಿ ಮಂದಿರದ ಬಳಿ ಇರುವ ಬೃಹತ್ ರಸ್ತೆ ಹೊಂಡದಲ್ಲಿ ಸಾರ್ವಜನಿಕರು ಬಾಳೆಗಿಡ ನೆಟ್ಟು ಪ್ರತಿಭಟಿಸಿರುವ ವಿಚಾರ ಇದೀಗ ಸಖತ್ತ್ ವೈರಲ್ ಆಗಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮುಜುಗರ ಸೃಷ್ಟಿಸಿದೆ.

ಮೂಲ್ಕಿಯಿಂದ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 70ಯ ಮೂಡುಬಿದಿರೆಯಿಂದ ಹೊಸಂಗಡಿವರೆಗಿನ ಭಾಗ ಪುರಸಬಾ ವ್ಯಾಪ್ತಿಯಲ್ಲಿದ್ದು ಹಲವಾರು ಕಡೆ ಹದಗೆಟ್ಟಿದೆ. ಕೆಲವು ಪ್ರದೇಶಗಳಲ್ಲಂತೂ ಬೃಹತ್ ಗಾತ್ರದ ಹೊಂಡಗಳು ಉಂಟಾಗಿದ್ದು ಹಲವು ಅಪಘಾತಗಳಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದರಿಂದ ಬೇಸತ್ತ ಸಾರ್ವಜನಿಕರು ಮಾರೂರಿನಲ್ಲಿನ ಬೃಹತ್ ರಸ್ತೆ ಹೊಂಡಗಳಲ್ಲಿ ಬಾಳೆಗಿಡಗಳನ್ನು ನೆಟ್ಟು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಇದರ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತ್ ವೈರಲ್ ಆಗಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತೀವ್ರ ಮುಜುಗರ ಅನುಭವಿಸುವಂತಾಗಿದೆ.

ಮೂಡುಬಿದಿರೆ ಬೆಳ್ತಂಗಡಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ಕಳೆದ 3 ವರ್ಷಗಳಿಂದ ಇಲಾಖೆಗೆ ಹತ್ತಾರು ಪತ್ರಗಳನ್ನು ಬರೆದಿದ್ದರೂ ಯಾವುದೇ ಮಹತ್ವದ ಕೆಲಸ ಆಗಿಲ್ಲ. ಹೀಗಿರುವಾಗ ಸಾರ್ವಜನಿಕರು ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿರುವುದು ಶ್ಲಾಘನೀಯ.
-ಅಕ್ಷಯ್ ಕೆ. ಜೈನ್, ಸಾಮಾಜಿಕ ಕಾರ್ಯಕರ್ತರು

Previous Post Next Post

Contact Form