ದಿಢೀರ್ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲ್ಲಣ


ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ , ಹಾಗೂ ಭಾನುವಾರ ರಾತ್ರಿ ಸುರಿದ ಭಾರಿ ಮಳೆ ಜನರನ್ನು ತಲ್ಲಣಗೊಳಿಸಿದೆ. ಯಕ್ಷಗಾನ ಪ್ರದರ್ಶನಗಳು ಸ್ಥಗಿತಗೊಂಡವು. ಹಲವು ಕಾರ್ಯಕ್ರಮಗಳಿಗೂ ಅಡ್ಡಿಯಾಯಿತು. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ವಿಮಾನಗಳು ಬೆಂಗಳೂರು, ಚೆನ್ನೈಗೆ ತೆರಳಬೇಕಾಯಿತು. ಹವಾಮಾನ ವೈಪರೀತ್ಯದಿಂದಾಗಿ ಈ ಸಮಸ್ಯೆಗಳು ಉಂಟಾದವು.

ಶನಿವಾರ ರಾತ್ರಿ 8 ಗಂಟೆಯ ಹೊತ್ತಿಗೆ ಪಶ್ಚಿಮ ಘಟ್ಟ ತಪ್ಪಲಲ್ಲಿಆರಂಭವಾದ ಮಳೆ ತನ್ನ ಚಲನೆಯನ್ನು ಮುಂದುವರಿಸಿ 10 ಗಂಟೆ ಸುಮಾರಿಗೆ ಮಂಗಳೂರು ನಗರಕ್ಕೆ ಎಂಟ್ರಿಯಾಗಿತ್ತು. ಏಕಾಏಕಿ ಕಣ್ ಕೋರೈಸುವ ಮಿಂಚು, ಗುಡುಗಿನ ಆರ್ಭಟ, ಬಿರುಸಿನ ಮಳೆಯಿಂದ ಜನರು ವಿಚಲಿತರಾಗಿದ್ದರು. ಗ್ರಾಮೀಣ ಭಾಗದಲ್ಲಿ ಅಂಗಳದಲ್ಲೇ ಒಣಗಲು ಹಾಕಿದ್ದ ಅಡಕೆ ರಾಶಿ ಮಾಡಲು ಪುರುಸೊತ್ತು ಕೊಡಲಿಲ್ಲ, ಗದ್ದೆಯಲ್ಲಿ ಒಣಗಲು ಹಾಕಿದ್ದ ಬೈಹುಲ್ಲು ಮತ್ತೆ ಒದ್ದೆಯಾಯಿತು. ರೈನ್ಕೋಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರು ಕೆಲಕಾಲ ಬಸ್ ತಂಗುದಾಣ, ಕಟ್ಟಡದ ಕೆಳಭಾಗದಲ್ಲಿ ಆಶ್ರಯ ಪಡೆದರು.

ಕಾರ್ಯಕ್ರಮಗಳಿಗೆ ವಿಘ್ನ: ವಾರದ ಹಿಂದೆ ಕರಾವಳಿ ಭಾಗದಲ್ಲಿ ಯಕ್ಷಗಾನ ಮೇಳಗಳು ಸುತ್ತಾಟ ಆರಂಭಿಸಿದ್ದು, ಶನಿವಾರ ಸುರಿದ ಮಳೆಯಿಂದ ಪ್ರದರ್ಶನಕ್ಕೆ ಅಡ್ಡಿಯಾಗಿತ್ತು. ಕಾಲಮಿತಿ ಯಕ್ಷಗಾನವಾದ ಕಾರಣ ಪ್ರಸಂಗ ಶೇ.50ರಷ್ಟು ಪೂರ್ಣಗೊಂಡಿತ್ತು. ಮಳೆ ಬಂದ ಕಾರಣ ಬಹುತೇಕ ಕಡೆ ಯಕ್ಷಗಾನ ಪ್ರದರ್ಶನ ನಿಲ್ಲಿಸಬೇಕಾಯಿತು. ಮಳೆ ಬಂದ ಕಾರಣ ಕಲಾಭಿಮಾನಿಗಳ ಅಲ್ಲಿಂದ ಕಾಲ್ಕಿತ್ತರು. ಕೆಲವೆಡೆ ಮಳೆ ನಿಂತ ಬಳಿಕ ಯಕ್ಷಗಾನ ಪ್ರದರ್ಶನವನ್ನು ಮುಂದುವರಿಸಿ ಮಂಗಳ ಹಾಡಲಾಯಿತು.

ಮದುವೆ, ಮೆಹಂದಿಗೆ ಅಡ್ಡಿ: ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮೆಹಂದಿ, ಸಂಗೀತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಲವು ಸಭಾಂಗಣದಲ್ಲಿ ನಡೆದಿದ್ದರೆ, ಇನ್ನು ಕೆಲವು ತೆರೆದ ಸಭಾ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಏಕಾಏಕಿ ಗಾಳಿ ಮಳೆ ಬಂದ ಕಾರಣ ಮೆಹಂದಿ, ಸಂಗೀತ್, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗಿತ್ತು.

ರಾತ್ರಿಯಿಡೀ ಕೈಕೊಟ್ಟ ವಿದ್ಯುತ್: ಶನಿವಾರ ಸುರಿದ ಭಾರಿ ಗಾಳಿ ಮಳೆ, ಗುಡುಗು ಆರ್ಭಟದಿಂದ ಗ್ರಾಮೀಣ ಭಾಗ ಸೇರಿದಂತೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ರಾತ್ರಿಯಿಡೀ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಹಕರು ತೊಂದರೆಗೊಳಗಾದರು. ಮೆಸ್ಕಾಂ ಕಚೇರಿ ಸಂಪರ್ಕಿಸಿ ಮಾಹಿತಿ ನೀಡಲು ಪ್ರಯತ್ನಪಟ್ಟರೆ ನಿರಂತರ ಫೋನ್ ಬಿಝಿ ಟೋನ್ ಕೇಳಿ ಬರುತ್ತಿತ್ತು.

ಬೆಂಗಳೂರು, ಚೆನ್ನೈಗೆ ತೆರಳಿದ ವಿಮಾನ: ಕರಾವಳಿ ಭಾಗದಲ್ಲಿ ಭಾರಿ ಮಳೆಯಿಂದ ಹವಾಮಾನ ವೈಪರೀತ್ಯದ ಪರಿಣಾಮ 3 ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಾಗದೆ ಬೆಂಗಳೂರು, ಚೆನ್ನೈಗೆ ತೆರಳಿವೆ.

ಮುಂಬಯಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಬೆಂಗಳೂರಿಗೆ, ಬೆಂಗಳೂರಿನಿಂದ ಆಗಮಿಸಿದ ವಿಮಾನ ಮರಳಿ ಬೆಂಗಳೂರಿಗೆ, ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಚೆನ್ನೈಗೆ ತೆರಳಿ ಲ್ಯಾಂಡ್ ಆಗಿದೆ. ಭಾರಿ ಗುಡುಗು ಸಹಿತ ಮಳೆಯಿಂದ ಹವಾಮಾನ ವ್ಯತ್ಯಯ ಉಂಟಾಗಿ ವಿಮಾನ ಇಳಿಯಲಾಗದೆ ವಿಮಾನ ನಿಲ್ದಾಣದ ಅಧಿಕಾರಿಗಳ ಸೂಚನೆಯಂತೆ ಬೆಂಗಳೂರು, ಚೆನ್ನೈಗೆ ತೆರಳಿತು.

Previous Post Next Post

Contact Form