ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಾಥ ಸುವರ್ಣ (46) ಸ್ಮಶಾನದಲ್ಲಿ ಶುಕ್ರವಾರ ಬೆಳಿಗ್ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಡುಮಾರ್ನಾಡು ಬಸದಿ ರಸ್ತೆ ಸಮೀಪದ ಪಡ್ಡೇಲು ಎಂಬ ಸ್ಥಳದಲ್ಲಿ ನಿರ್ಮಾಣ ಹಂತದ ಸ್ಮಶಾನದಲ್ಲಿರುವ ಟ್ಯಾಂಕ್‌ನ ಸ್ಟೇರ್‌ಕೇಸ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಬೆಳಿಗ್ಗೆ ಮನೆಯಿಂದ ಹೊರಟು ಬಂದವರು ಬೆಳುವಾಯಿ ಪೇಟೆಯಲ್ಲಿ ಹಗ್ಗ ಖರೀದಿಸಿ ಅಲ್ಲಿಂದ ಸ್ಮಶಾನಕ್ಕೆ ಹೋಗಿರಬೇಕೆಂದು ತಿಳಿದುಬಂದಿದೆ.
ಅವರದ್ದೇ ವಾರ್ಡ್ನಲ್ಲಿರುವ ಈ ಸ್ಮಶಾನಕ್ಕೆ ಹೋಗುವ ರಸ್ತೆಗೆ ಕೇವಲ ಒಂದು ತಿಂಗಳ ಹಿಂದೆ ಕಾಂಕ್ರೀಟ್ ಹಾಕಿಸಿದ್ದರು. ಆದರೆ, ಇಂದು ಅದೇ ರಸ್ತೆಯಲ್ಲಿ ಬಂದು ಅವರು ತಮ್ಮ ಬದುಕನ್ನು ಅಂತ್ಯಗೊಳಿಸಿದ್ದಾರೆ.
ಪಡುಮಾರ್ನಾಡು ಗ್ರಾಮ ಪಂಚಾಯತಿ ಸದಸ್ಯರಾಗಿ ನಾಲ್ಕು ಬಾರಿ ಚುನಾಯಿತರಾಗಿದ್ದ ಇವರು ಒಂದು ಅವಧಿಗೆ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಬೆಳುವಾಯಿ ಸಹಕಾರಿ ಸಂಘದ ನಿರ್ದೇಶಕರೂ ಆಗಿದ್ದರು.
ಸಮಾಜಸೇವೆಯಲ್ಲಿ ಸಕ್ರಿಯರಾಗಿದ್ದ ವ್ಯಕ್ತಿಯೊಬ್ಬರು ಇಂತಹ ದುರಂತ ನಿರ್ಧಾರ ತೆಗೆದುಕೊಂಡಿರುವುದು ಮೂಡುಬಿದಿರೆ ಮತ್ತು ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಆಘಾತ ಮತ್ತು ನೋವನ್ನುಂಟು ಮಾಡಿದೆ.
ಕೆಲವು ಸಮಯಗಳಿಂದ ಅವರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರೆನ್ನಲಾಗಿದೆ. ಅವರಿಗೆ ಪತ್ನಿ ಇದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
