(IANS) ಬಾಗಲಕೋಟೆ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಜೊತೆಜೊತೆಗೆ ಸರಕಾರಕ್ಕೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿರುವ 40% ಕಮಿಷನ್ ಆರೋಪದ ಜೊತೆಗೆ ಇದೀಗ ಲಿಂಗಾಯತ ಸ್ವಾಮೀಜಿಯೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಎಸ್.ಆರ್. ಪಾಟಿಲ್ ಏರ್ಪಡಿಸಿದ್ದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಮಾತನಾಡಿದ ದಿಂಗಳೇಶ್ವರ ಸ್ವಾಮೀಜಿ ಅವರು "ಆಡಳಿತದಲ್ಲಿರುವ ಬಿಜೆಪಿ ಸರಕಾರ ಗುತ್ತಿಗೆದಾರರಿಂದ ಮಾತ್ರ ಕಮಿಷನ್ ಪಡೆಯುತ್ತಿಲ್ಲ, ಜೊತೆಗೆ ಅನುದಾನ ಬಿಡುಗಡೆಗೊಳಿಸಲು ಧಾರ್ಮಿಕ ಮಠಗಳಿಂದಲೂ 30% ಕಮಿಷನ್ ಪಡೆಯುತ್ತದೆ" ಎಂಬ ಆರೋಪ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.
"ಕಮಿಷನ್ ಬಗ್ಗೆ ಅಧಿಕಾರಿಗಳೇ ಹೇಳುತ್ತಾರೆ. ದೆಹಲಿ ಅಥವಾ ಬೆಂಗಳೂರಿನಲ್ಲಿ ಐಸ್ ಕ್ರೀಮ್ ಕೊಟ್ಟರೆ, ಅದು ಉತ್ತರ ಕರ್ನಾಟಕಕ್ಕೆ ತಲುಪುವಾಗ ಕಡ್ಡಿ ಮಾತ್ರ ಉಳಿಯುತ್ತದೆ." ಎಂದವರು ಆರೋಪಿಸಿದ್ದಾರೆ.
ಸ್ವಾಮೀಜಿಗಳ ಈ ಆರೋಪ ರಾಜಕೀಯದ ಪಡಸಾಲೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ವಿರೋಧ ಪಕ್ಷದ ಕಾರ್ಯಾಧ್ಯಕ್ಷ ಜಾರಕೀಹೋಳಿ ಮತ್ತು ಈಶ್ವರ ಖಂಡ್ರೆ ಅವರು ಬಿಜೆಪಿ ಮೇಲೆ ಹೈವೋಲ್ಟೇಜ್ ದಾಳಿ ನಡೆಸಿದ್ದಾರೆ.