ಮಂಗಳೂರು, ಎ.3: ಜೀವನದ ವಿವಿಧ ಅನುಭವಗಳು ಉತ್ತಮ ವ್ಯಕ್ತಿತ್ವ ರೂಪಿಸಲು ಕಾರಣವಾಗುತ್ತಿವೆ. ಆದ್ದರಿಂದ ಬದುಕಿನ ಎಲ್ಲಾ ಹಂತಗಳನ್ನು ಚೆನ್ನಾಗಿ ಅನುಭವಿಸಿ ಅದರ ರುಚಿಯನ್ನು ಸವಿಯಬೇಕು ಎಂದು ವಿಶಾಖ ಪಟ್ಟಣದ ಗೀತಂ ಯೂನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸಸ್ನ ಸಹ ಕುಲಾಧಿಪತಿ ಹಾಗೂ ಭುವನೇಶ್ವರ ಏಮ್ಸ್ನ ಮಾಜಿ ನಿರ್ದೇಶಕರಾದ ಡಾ| ಗೀತಾಂಜಲಿ ಬಟ್ಮನಬನ್ ಹೇಳಿದರು.
ಅವರು ಶನಿವಾರ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಈ ಕ್ಯಾಂಪಸ್ನಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಪದವಿ ಪಡೆದು ಹೊರ ಬರುತ್ತಿರುವ ವಿದ್ಯಾರ್ಥಿಗಳು ಸಮಾಜಕ್ಕೆ ನೆರವು ಒದಗಿಸುವ ಸತ್ಪ್ರಜೆಗಳಾಗ ಬೇಕು. ಕಲಿಕೆ ನಿರಂತರವಾಗಿದ್ದು, ಬದುಕಿರುವ ತನಕ ಕಲಿಯುತ್ತಿರಬೇಕು. ಉತ್ತಮ ವಿಚಾರಗಳಿಗೆ ಸದಾ ಸ್ಪಂದಿಸುವ ವ್ಯಕ್ತಿಗಳಾಗ ಬೇಕೆಂದರು.
ಗೌರವ ಅತಿಥಿಯಾಗಿದ್ದ ಹೈಕೋರ್ಟ್ನ ಮಾಜಿ ನ್ಯಾಯಾಧೀಶರಾದ ಜಾನ್ ಮೈಕಲ್ ಡಿಕುನ್ಹಾ ಅವರು ಮಾತನಾಡಿ, ವೈದ್ಯರು, ನರ್ಸ್ಗಳು ಮತ್ತು ನ್ಯಾಯಾಧೀಶರ ಸಹಿತ ಎಲ್ಲಾ ವೃತ್ತಿನಿರತರು ತಮ್ಮ ಕೆಲಸ ಕಾರ್ಯಗಳಲ್ಲಿ ವಿಶ್ವಾಸಾರ್ಹತೆಯನ್ನು ಕಾಯ್ದು ಕೊಂಡು ಜನರು ತಮ್ಮ ಮೇಲೆ ಇರಿಸಿದ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸ ಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಮಂಗಳೂರಿನ ಬಿಷಪ್ ಅತಿ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಮಾತನಾಡಿ, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ವೃತ್ತಿನಿರತರು ಸಹಾನುಭೂತಿಯಿಂತ ಕರ್ತವ್ಯ ನಿರ್ವಹಿಸಿ ವೃತ್ತಿಯ ಘನತೆ, ಗೌರವವನ್ನು ಕಾಯ್ದುಕೊಂಡು ಬರ ಬೇಕೆಂದರು.
615 ವಿದ್ಯಾರ್ಥಿಗಳಿಗೆ ಪದವಿ: ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಗಳ 147 ಎಂಬಿಬಿಎಸ್, 82 ಸ್ನಾತಕೋತ್ತರ ಪದವಿ, ಒಬ್ಬರಿಗೆ ಪಿ.ಎಚ್ ಡಿ, ಒಬ್ಬರಿಗೆ ಎಂಸಿಎಚ್, 8 ಎಂಪಿಟಿ, 41 ಬಿಪಿಟಿ, 11 ಎಂಎಸ್ಸಿ, 11 ಎಂಎಲ್ಟಿ, 23 ಎಂಎಚ್ಎ, 31 ಬಿಎಸ್ಸಿ ಎಂಎಲ್ಟಿ, 24 ಬಿಎಸ್ಸಿ ಎಂಐಟಿ, 7 ಬಿಎಸ್ಸಿ ಆರ್ಟಿ, 32 ಸ್ಪೀಚ್ ಆಂಡ್ ಹಿಯರಿಂಗ್, 54 ಜಿಎನ್ಎಂ, 93 ಬಿಎಸ್ಸಿ ನರ್ಸಿಂಗ್, 51ಪಿಬಿಎಸ್ಸಿ ನರ್ಸಿಂಗ್, 9 ಎಂಎಸ್ಸಿ ನರ್ಸಿಂಗ್ ಸೇರಿದಂತೆ ವಿವಿಧ್ ಕೋರ್ಸುಗಳ ಒಟ್ಟು 615 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ| ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿ ವಿವಿಧ ಕಾಲೇಜುಗಳ ವರದಿ ಮಂಡಿಸಿದರು. ಪದವಿ ಪ್ರದಾನ ಸಮಾರಂಭದ ಸಂಚಾಲಕ ವಂ| ಅಜಿತ್ ಬಿ. ಮಿನೇಜಸ್ ವಂದಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಡಾ| ಮಯೂರಿ ಜಿ. ಭಟ್, ವಿಯೋಲಾ ತೋಮಸ್ ಫೆರ್ನಾಂಡಿಸ್, ವೀಣಾ ಮೆಲಿಶಾ ಫೆರ್ನಾಂಡಿಸ್, ಕೇಸಿಯಾ ಎಲ್ಸಾ ವರ್ಗೀಸ್, ಎಂ. ಜಿನಿಕಾ ಜೋನಿ, ಮೆಕ್ಲಿನ್ ಜಾರ್ಜ್ ಲೆವಿಸ್ ಅವರಿಗೆ ಅಧ್ಯಕ್ಷರ ಚಿನ್ನದ ಪದಕ ನೀಡಲಾಯಿತು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ವಂ| ರುಡಾಲ್ಫ್ ರವಿ ಡೇಸಾ, ಸಹಾಯಕ ಆಡಳಿತಾಧಿಕಾರಿ ವಂ| ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವಂ| ನೆಲ್ಸನ್ ಧೀರಜ್ ಪಾಯ್ಸ್, ವಂ| ಜಾರ್ಜ್ ಜೀವನ್ ಸಿಕ್ವೇರಾ, ಡೀನ್ಗಳಾದ ಡಾ| ಆಂಟನಿ ಸಿಲ್ವನ್ ಡಿ ಸೋಜಾ, ಡಾ| ಉರ್ಬನ್ ಜೆ.ಎ. ಡಿ ಸೋಜಾ, ಪ್ರಾಂಶುಪಾಲರಾದ ಸಿ| ಜೆಸಿಂತಾ ಡಿ ಸೋಜಾ, ಪ್ರೊ| ಅಖಿಲೇಶ್ ಪಿ.ಎಂ., ಸಿ| ನ್ಯಾನ್ಸಿ ಮಥಾಯಸ್ ಮತ್ತಿತರರು ಉಪಸ್ಥಿತರಿದ್ದರು.