ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿತದಿಂದ ಒಬ್ಬ ಮಹಿಳೆ ಸೇರಿದಂತೆ ಮೂವರು ಕಾರ್ಮಿಕರು ಬಲಿಯಾದ ಭಯಾನಕ ದುರಂತ ಸುಳ್ಯದಲ್ಲಿ ಶನಿವಾರ ಸಂಭವಿಸಿದೆ. ನಗರ ಪಂಚಾಯತ್ ವ್ಯಾಪ್ತಿಯ ಸುಳ್ಯ ಪೇಟೆ ಸಮೀಪದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಮಧ್ಯಾಹ್ನದ ವೇಳೆಗೆ ಈ ಭಯಾನಕ ಘಟನೆ ನಡೆದಿದೆ.
ಸುಳ್ಯದ ಅಬೂಬಕ್ಕರ್ ಎಂಬುವವರು ತಮ್ಮ ಮನೆ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುತ್ತಿದ್ದರು. ಅವರ ಮನೆ ಬಳಿಕ ಬೃಹತ್ ಗುಡ್ಡವನ್ನು ತೆರವುಗೊಳಿಸಿದ್ದರಿಂದ, ಅದರ ಮಣ್ಣು ಕುಸಿಯದಂತೆ ತಡೆಯಲು ತಡೆಗೋಡೆ ನಿರ್ಮಿಸಲಾಗುತ್ತಿತ್ತು. ಅದಕ್ಕಾಗಿ ಪಿಲ್ಲರ್ ನಿರ್ಮಿಸುವ ಕಾರ್ಯ ನಡೆಯುತ್ತಿತ್ತು. ಏಳು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಆಗ ಹಠಾತ್ತನೆ ಮಣ್ಣು ಕುಸಿದುಬಿದ್ದಿದೆ. ಈ ವೇಳೆ ನಾಲ್ವರು ಹೇಗೋ ಓಡಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮೂವರು ಮಣ್ಣಿನ ಅಡಿ ಸಿಲುಕಿದ್ದರು.
ಕೂಡಲೇ ಜೆಸಿಬಿ ಸಹಾಯದಿಂದ ಮಣ್ಣನ್ನು ತೆರವುಗೊಳಿಸಿ, ಅದರ ಅಡಿ ಸಿಲುಕಿದ್ದವರನ್ನು ಹೊರಗೆ ತೆಗೆಯುವ ಪ್ರಯತ್ನ ನಡೆಸಲಾಯಿತು. ಸತತ ಒಂದೂವರೆ ಗಂಟೆಗೂ ಅಧಿಕ ಸಮಯ ಈ ಕಾರ್ಯಾಚರಣೆ ನಡೆಸಲಾಗಿತ್ತು. ಅವರನ್ನು ಹೊರಗೆ ತೆಗೆಯುವ ಹೊತ್ತಿಗಾಗಲೇ ಮೂವರೂ ಮೃತಪಟ್ಟಿದ್ದರು ಎನ್ನಲಾಗಿದೆ. ಮೃತದೇಹಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇಗೊಡ್ಡೆಟ್ಟಿ ಸೋಮಶೇಖರ್ ರೆಡ್ಡಿ (45), ಅವರ ಪತ್ನಿ ಶಾಂತಕ್ಕ (35) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತ ಯುವಕನ ಹೆಸರು ಮತ್ತು ವಿಳಾಸ ತಿಳಿದುಬಂದಿಲ್ಲ.