ಮೂಡುಬಿದಿರೆ: ವಿಜಯನಾಥ ವಿಠಲ ಶೆಟ್ಟಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ


ಮೂಡುಬಿದಿರೆ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿದ್ದು, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ವಿಜಯನಾಥ ವಿಠಲ ಶೆಟ್ಟಿ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ಉದ್ಯಮಿ, ಎಡಪದವು ಶಾಸ್ತಾವು ಶ್ರೀ ಭೂತನಾಥೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರರೂ ಆಗಿರುವ ವಿಜಯನಾಥ ವಿಠಲ ಶೆಟ್ಟಿ ಅವರು ‘ಬಲೇ ತೆಲಿಪಾಲೆ’ ಕಾರ್ಯಕ್ರಮದ ಮೂಲಕ ಜನರಿಗೆ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ.

ಇನ್ನುಳಿದಂತೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ಮಾಜಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಸುಳ್ಯ ಕ್ಷೇತ್ರದಿಂದ ಸುಮನಾ ಮತ್ತು ಕಾರ್ಕಳ ಕ್ಷೇತ್ರದಿಂದ ಡ್ಯಾನಿಯಲ್ ಅವರ ಹೆಸರುಗಳು ಘೋಷಣೆಯಾಗಿದೆ.

ಮೊದಲ ಹಂತದಲ್ಲಿ 90 ಮಂದಿ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಗೊಳಿಸಲಾಗಿದ್ದು, 7 ಮಂದಿ ರೈತರು ಹಾಗೂ 7 ಮಂದಿ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ.

ಪಟ್ಟಿ ಬಿಡುಗಡೆಯ ಬಳಿಕ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪ್ರಥ್ವಿ ರೆಡ್ಡಿ, ಈಗ ಎಎಪಿ ಎಲ್ಲವನ್ನೂ ಬದಲಾಯಿಸಿದೆ. ಸಾಮಾನ್ಯ ಹಿನ್ನೆಲೆಯ ಪ್ರಾಮಾಣಿಕ ಜನರನ್ನು ನಾವು ರಾಜಕೀಯಕ್ಕೆ ಕರೆತಂದಿದ್ದೇವೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದೇವೆ. ಜಯಗಳಿಸದ ನಂತರ ಶೇ. 100ರಷ್ಟು ಭ್ರಷ್ಟಾಚಾರರಹಿತ ಆಡಳಿತ ನೀಡುವುದು ಮಾತ್ರವಲ್ಲದೇ, ಪ್ರತಿಯೊಬ್ಬ ನಾಗರಿಕನಿಗಿರುವ ಕನಸು ಕಾಣುವ ಹಾಗೂ ಬೆಳೆಯುವ ಹಕ್ಕುಗಳನ್ನು ಕಾಪಾಡುವುದಾಗಿ ಇವರು ಖಚಿತ ಪಡಿಸಿದ್ದಾರೆ ಎಂದರು.

ನಮ್ಮ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಯುವ ಸ್ಪರ್ಧಿಗಳು. ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನಮ್ಮ ಮೊದಲ ಪಟ್ಟಿಯಲ್ಲಿ 7 ರೈತರು ಇರುವುದು ನಮಗೆ ಖುಷಿ ತಂದಿದೆ. ನಮ್ಮ ಜನಸಂಖ್ಯೆಯ ಶೇ. 50ರಷ್ಟು ಮಹಿಳೆಯರು, ಮತ್ತು ಬೇರೆ ಪಕ್ಷಗಳು ಅವರನ್ನು ನಾಮನಿರ್ದೇಶನ ಮಾಡದ ಕಾರಣ ಮಹಿಳೆಯರಿಗೆ ಸಾರ್ವಜನಿಕ ಹುದ್ದೆಯನ್ನು ಪಡೆಯುವುದು ಕಷ್ಟವಾಗಿದೆ. ನಮ್ಮ ಮೊದಲ ಪಟ್ಟಿಯಲ್ಲಿ 7 ಮಹಿಳೆಯರಿದ್ದಾರೆ ಎನ್ನಲು ನಾವು ಸಂತೋಷಪಡುತ್ತೇವೆ ಎಂದರು.

Previous Post Next Post

Contact Form