ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಕಾರ್ಯಾಗಾರ

ಮೂಡುಬಿದಿರೆ:  ಜ್ಞಾನ ಹಾಗೂ ಕೌಶಲದ ಜೊತೆ ಸೃಜನಶೀಲ ಬೌದ್ಧಿಕ ಆಸ್ತಿಯ ಸಂರಕ್ಷಣೆ ಹಾಗೂ ಅನುಷ್ಠಾನವು ಪ್ರಚಲಿತ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ಸಿಎಸ್ಟಿ) ಮುಖ್ಯ ವಿಜ್ಞಾನಾಧಿಕಾರಿ ಡಾ. ಹೇಮಂತ್ ಕುಮಾರ್ ಹೇಳಿದರು.


ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಮಂಗಳವಾರ ನಡೆದ ‘ಶೈಕ್ಷಣಿಕ ಪರಿಸರದಲ್ಲಿ ಬೌದ್ಧಿಕ ಆಸ್ತಿಯ ಅಭಿವೃದ್ಧಿ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆಗಳು ಕೇವಲ ಬೋಧನೆಗೆ ಸೀಮಿತಗೊಂಡರೆ ಸಾಲದು, ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು. ಇದಕ್ಕೆ ಆಳ್ವಾಸ್ ಮಾದರಿ ಎಂದರು. 

ಯಾವುದೇ ನಾವಿನ್ಯ ಯೋಚನೆ ಇದ್ದರೆ, ಅದಕ್ಕೆ ಯೋಜನೆ ರೂಪಿಸಿ ಫಲಪ್ರದಗೊಳಿಸಲು ಕೆಎಸ್ಸಿಎಸ್ಟಿ ಸಿದ್ಧವಿದೆ. ಈಗಾಗಲೇ ಹಲವಾರು ಯೋಚನೆ, ಆವಿಷ್ಕಾರಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಎಲ್ಲರೂ ನವೋದ್ಯಮ ಸ್ಥಾಪಿಸುವುದು ಕಷ್ಟ ಸಾಧ್ಯ. ಇದಕ್ಕೆ ಸಾಹಸಿ ಪ್ರವೃತ್ತಿ ಹಾಗೂ ಮುನ್ನುಗ್ಗುವ ಛಲ, ಬದ್ಧತೆ ಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ  ಅವರಲ್ಲಿ ಅಂತಹ ಬದ್ಧತೆ, ಪ್ರೀತಿ ಮತ್ತು ಛಾತಿ ಇತ್ತು ಎಂದರು. 

ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ರಿಚರ್ಡ್ ಪಿಂಟೊ ಮಾತನಾಡಿ, ನಮ್ಮ ಜ್ಞಾನವೇ ಭವಿಷ್ಯವನ್ನು ರೂಪಿಸುತ್ತದೆ ಎಂದರು. ಕಾರ್ಯಾಗಾರದ ಸಂಯೋಜಕ ಡಾ. ದತ್ತಾತ್ರೇಯ, ಎಐಇಟಿ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್ ಇದ್ದರು. ಕ್ಯಾಥರಿನ್ ನಿರ್ಮಲಾ ನಿರೂಪಿಸಿದರು. 


Previous Post Next Post

Contact Form