ಮಿಥುನ್ ರೈ ನಾಮಪತ್ರ ಸಲ್ಲಿಕೆ ಬೃಹತ್ ಸಮಾವೇಶ

ಟೈಮ್ಸ್ ಆಫ್ ಬೆದ್ರ ಲೈವ್ ಕವರೇಜ್

ಮೂಡುಬಿದಿರೆ: ಮೂಡುಬಿದಿರೆ ಮೂಲ್ಕಿ ಕ್ಷೇತ್ರದ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ನಾಮಪತ್ರ ಸಲ್ಲಿಕೆಯ ಬೃಹತ್ ಸಮಾವೇಶ ಸೋಮವಾರ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.


ಕೆಪಿಸಿಸಿ ವಕ್ತಾರ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮರೋಳಿ ದಿಕ್ಸೂಚಿ ಭಾಷಣ ಮಾಡಿ 'ಬಿಜೆಪಿಯವರ ಬಾಯಿ ಬಡಾಯಿ. ಮಾತಾಡಿದ್ದು ಜಾಸ್ತಿ, ಮಾಡಿದ್ದು ಏನೂ ಇಲ್ಲ. ಎಲ್ಲದಕ್ಕೂ ಶ್ರಮ ನಮ್ಮದು, ಫೋಟೋ ಮಾತ್ರ ಮೋದಿಯದ್ದು.'

ಬೇಟಿ ಪಾಡಾವೋ, ಬೇಟೀ ಬಚಾವೊ ಅಂತ ಮಾಡಿದ್ದಾರೆ. ಆದರೆ ಇವತ್ತು ರೇಣುಕಾಚಾರ್ಯ, ಜಾರಕೀಹೋಳಿ ಮುಂತಾದವರಿಂದ ಹೆಣ್ಣು ಮಕ್ಕಳನ್ನು ಬಚಾವು ಮಾಡುವ ಸಂದರ್ಭ ಬಂದಿದೆ.

ಎಲ್ಲದಕ್ಕೂ ಶ್ರಮ ಪಡುವುದು ನಾವು. ಆದರೆ ಎಲ್ಲದಕ್ಕೂ ಫೋಟೋ ಮಾತ್ರ ಮೋದಿದ್ದು.

ನಳಿನ್ ಕುಮಾರ್ ಅವರು ಅಭಿವೃದ್ಧಿ ಕೇಳಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತ ಹೇಳುತ್ತಿರುವುದು ಜನರಿಗೆ ಮಾಡುವ ದ್ರೋಹ ಎಂದರು.

ಕಾಂಗ್ರೆಸಿಗರ ಹೃದಯದಲ್ಲಿ ರಾಮ ಇದ್ದಾರೆ, ಕೃಷ್ಣ ಇದ್ದಾರೆ, ಯೇಸು ಇದ್ದಾರೆ, ಅಲ್ಲಾಹ್ ಇದ್ದಾರೆ. ಆದರೆ ಬಿಜೆಪಿಗರ ರಕ್ತದಲ್ಲಿ ದ್ವೇಷ ರಾಜಕಾರಣ ಮಾತ್ರ ಇರೋದು ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ' ಮಿಥುನ್ ರೈ ಅವರನ್ನು ಮೂಡುಬಿದಿರೆಗೆ ಆರಿಸಿದ್ದು ಕೆಪಿಸಿಸಿ ಅಲ್ಲ, ಮೂಡುಬಿದಿರೆಯ ಜನರೇ ಮಿಥುನ್ ರೈ ಅವರನ್ನು ಆರಿಸಿದ್ದಾರೆ' ಎಂದರು.

ನಾನು ಕೇವಲ ನಾಲ್ಕೂವರೆ ಕೋಟಿಯಲ್ಲಿ ಮೂಡುಬಿದಿರೆಗೆ ವೆಂಟೆಡ್ ಡ್ಯಾಂ ಮಾಡಿದ್ದು 23 ವರ್ಷಗಳಿಂದ ಇಂದಿಗೂ ಮೂಡುಬಿದಿರೆಯ ಜನತೆಗೆ ನೀರು ಸಿಗುವಂತಾಗಿದೆ. ಆದರೆ ಇವತ್ತು ಬಿಜೆಪಿ ಸರಕಾರ ನೂರಾರು ಕೋಟಿ ಖರ್ಚುಮಾಡಿ ಕಟ್ಟಿದ ಎಣ್ಣೆಹೊಳೆ ಡ್ಯಾಂ ನಲ್ಲಿ ಮುತಾಲಿಕ್ ಆಟ ಆಡುತ್ತಿರುವುದು ಎಷ್ಟು ಹಾಸ್ಯಾಸ್ಪದ ನೋಡಿ ಎಂದರು.

ಮಿಥುನ್ ರೈಗೆ ಅವರಿಗೆ 40% ಕಮಿಷನ್ ದುಡ್ಡಿನ ಅಗತ್ಯ ಇಲ್ಲ. ಅಂತಹ ಮನೆತನದಿಂದ ಬಂದವರು ಮಿಥುನ್ ರೈ. ಕಳೆದ 5 ವರ್ಷಗಳಲ್ಲಿ ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಮಾಡಿದ ಭೃಷ್ಟಾಚಾರ ಹಿಂದೆ ಯಾರೂ ಮಾಡಿಲ್ಲ. ಮಿಥುನ್ ರೈ ಗೆದ್ದರೆ ನಾವೆಲ್ಲರೂ ಶಾಸಕರಾದಂತೆ ಎಂದು ಅಭಯಚಂದ್ರ ಜೈನ್ ಹೇಳಿದರು.

ಅಭ್ಯರ್ಥಿ ಮಿಥುನ್ ರೈ ಮಾತನಾಡಿ 'ಅಭಯಚಂದ್ರ ಜೈನ್ ಅವರು ಮಾಡಿದ ತ್ಯಾಗವನ್ನು ನಾವು ಯಾವತ್ತೂ ಮರೆಯಬಾರದು. ಯುವ ಕಾಂಗ್ರೆಸ್ ದಿನಗಳಿಂದ ಇಂದಿನ ವರೆಗೆ ಜೊತೆಗೆ ನಿಂತ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ, ತಿದ್ದಿ ಬೆಳೆಯಲು ಕಾರಣರಾದ ಹಿರಿಯರಿಗೆ, ರಾಜಕೀಯವಾಗಿ ಬೆಳೆಸಿದ ಎಲ್ಲರನ್ನೂ ಸ್ಮರಿಸುತ್ತೇನೆ.'

'ಸತ್ಯ ಮಾತನಾಡಲು ನಾನು ಹಿಂಜರಿದಿಲ್ಲ. ಎಲ್ಲಾ ಕಾರ್ಯಕರ್ತರು ನನ್ನ ಬೂತಿನಲ್ಲಿ ನಾನೇ ಅಭ್ಯರ್ಥಿ ಎಂಬ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. 5 ವರ್ಷ ನಾವು ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದೇವೆ. ಇನ್ನುಳಿದ 23 ದಿನಗಳಲ್ಲಿ ನಾವು ಛಲದಿಂದ ಮುಂದುವರಿದರೆ ಗೆಲ್ಲುವುದು ನಾವೇ.'

ಮಿಥುನ್ ರೈ  ಅಭಯ ಚಂದ್ರರ ನಡುವೆ ಘರ್ಷಣೆಯಾಗಿದೆ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಅಭಯಚಂದ್ರರು ಕೃಷ್ಣನಂತೆ ನಮ್ಮ ಸಾರಥಿಯಾಗಿದ್ದಾರೆ. ಅವರು ಎಂದೆಂದಿಗೂ ನಮ್ಮ ಜೊತೆ ಇರುವವರು. ಅವರಿಗೂ ನನಗೂ ಘರ್ಷಣೆಯಾಗುವುದು ಯಾವತ್ತೂ ಸಾಧ್ಯವಿಲ್ಲ ಎಂದರು.

ಎಲ್ಲಾ ಕಾರ್ಯಕರ್ತರು ಇನ್ನು ಚುನಾವಣೆಗೆ ಉಳಿದ 24 ದಿನ ಅವಿರತ ದುಡಿದು, 25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಮಿಥುನ್ ರೈ ಅವರನ್ನು ಗೆಲ್ಲಿಸಿ, 5 ವರ್ಷ ಮಿಥುನ್ ರೈ ಅವರು ಕ್ಷೇತ್ರಕ್ಕಾಗಿ ದುಡಿಯುವ ಅವಕಾಶ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ. ಹರೀಶ್ ನುಡಿದರು.


ಯುಟಿ ಖಾದರ್ ಮಾತನಾಡಿ 'ಇಂದು ಅಧಿಕಾರಕ್ಕಾಗಿ, ಟಿಕೆಟ್ ಗಾಗಿ ನಡೆಯುವ ವಿದ್ಯಾಮಾನದಲ್ಲಿ ಯುವ ನಾಯಕ ಮಿಥುನ್ ರೈ ಅವರಿಗೆ ಅವಕಾಶ ನೀಡಿ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಇವತ್ತು ಮಿಥುನ್ ರೈ ಅವರನ್ನು ಗೆಲ್ಲಿಸುವುದು ಮಾತ್ರವಲ್ಲ, ರಾಜ್ಯದಲ್ಲಿನ ಜನವಿರೋಧಿ ಬಿಜೆಪಿಯನ್ನು ಸೋಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತರುವ ನಿಟ್ಟಿನಲ್ಲಿ ಗೆಲ್ಲಿಸಬೇಕಿದೆ' ಎಂದರು.

ಬಿಜೆಪಿ ಸರಕಾರ ಜನರು ಬಳಸುವ ಉಪ್ಪಿನ ಮೇಲೆ ಕೂಡಾ ಟ್ಯಾಕ್ಸ್, ಪ್ರತಿಯೊಂದರ ಮೇಲೂ ಟ್ಯಾಕ್ಸ್ ಹಾಕಿ ಭೃಷ್ಟಾಚಾರದ ಪರಮಾವಧಿಯ ಆಡಳಿತ ಮಾಡಿದೆ. ಜನಸಾಮಾನ್ಯರ ಬದುಕು ಕಷ್ಟಕರ ಮಾಡಿದ ಬಿಜೆಪಿಯನ್ನು ಕೆಳಗಿಳಿಸುವ ಕೆಲಸ ಸರಕಾರದಿಂದ ಆಗಬೇಕಿದೆ. ಗ್ಯಾಸ್ ಬೆಲೆ ಏರಿಕೆ, ಅಡುಗೆ ಎಣ್ಣೆಯ ಬೆಲೆ ಏರಿಕೆ, ಚಿನ್ನದ ಬೆಲೆ ಏರಿಕೆ ಎಲ್ಲವೂ ಏರಿಸಿ ಜನರು ಬದುಕಲು ಕಷ್ಟವಾಗಿದೆ.

ಇವತ್ತು ಬಿಜೆಪಿ ಸರಕಾರ ವೆಂಟಿಲೇಟರ್ ನಲ್ಲಿ ಕೊನೆಯ ಉಸಿರು ಬಿಡುತ್ತಿದೆ. ಹಾಗಾಗಿ ಎಲ್ಲಾ ಕಡೆ ಕಾಂಗ್ರೆಸ್ ಕಾರ್ಯಕರ್ತರು ಅತ್ಯುತ್ಸಾಹದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ದುಡಿಯಬೇಕಿದೆ ಎಂದರು.

ಮಂಗಳೂರು ಮನಪಾ ಕಾರ್ಪೋರೇಟರ್ ಎಸಿ ವಿನಯರಾಜ್ ಮಾತನಾಡಿ 'ಈ ಮೂಡುಬಿದಿರೆ ಕ್ಷೇತ್ರ ಬಿಜೆಪಿಗೆ ಇರುವ ಕ್ಷೇತ್ರ ಎಂದು ಬಿಜೆಪಿಯವರು ಯೋಚಿಸಬಾರದು. ಈ ಕ್ಷೇತ್ರ ಕಾಂಗ್ರೆಸ್ಸಿನ ನೆಲೆ ಎಂದು ಬಿಜೆಪಿಯವರು ತಿಳಿದುಕೊಳ್ಳಬೇಕು ಎಂದರು. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಬಡ ಜನರಿಗೆ ಕೊಟ್ಟಿರುವ ಕೊಡುಗೆಯನ್ನು ಜನರು ಮರೆಯುವುದಿಲ್ಲ' ಎಂದರು.

ಬಿಜೆಪಿ ಸರಕಾರದಲ್ಲಿ 40% ಕಮಿಷನ್ ತೆಗೆದುಕೊಳ್ಳುವ ಬಗ್ಗೆ ಗುತ್ತಿಗೆದಾರರು ಪ್ರಧಾನ ಮಂತ್ರಿಗಳಿಗೆ ದೂರು ನೀಡಿದರೂ ಯಾವುದೇ ತನಿಖೆ ಮಾಡದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಮಮತಾ ಗಟ್ಟಿ ಮಾತನಾಡಿ ಮಿಥುನ್ ರೈ ಎಂಬ ದಕ್ಷ ಯುವ ನಾಯಕನಿಗೆ ಅವಕಾಶ ಕೊಟ್ಟ ಅಭಯಚಂದ್ರ ಜೈನ್ ಅವರನ್ನು ಅಭಿನಂದಿಸುತ್ತೇನೆ. ಈಗ ಕಾರ್ಯಕರ್ತರಾದ ನಾವು ಕ್ಷೇತ್ರದಲ್ಲೆಡೆ ಕಾರ್ಯನಿರ್ವಹಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

ಇವತ್ತು 1,200 ರೂ ಕೊಟ್ಟು ಗ್ಯಾಸ್ ತರುವಾಗ ಮಹಿಳೆಯರಿಗೆ ಎಷ್ಟು ಸಂಕಷ್ಟ ಆಗುತ್ತದೆ ಎಂದು ಗೊತ್ತು. ಹಾಗಾಗಿ ಈ ಸಾರಿ ಮಹಿಳೆಯರು ಬಿಜೆಪಿಯನ್ನು  ಸೋಲಿಸುವ ಕೆಲಸವನ್ನು ಮಾಡುತ್ತಾರೆ ಮಮತಾ ಗಟ್ಟಿ ನುಡಿದರು.

Previous Post Next Post

Contact Form