ಬಿಜೆಪಿ ಸಂಸದ, ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬಂಧನ ಯಾಕಿಲ್ಲ?

ಲಕ್ನೋ: (IANS) ದೇಶದ ತುಂಬೆಲ್ಲಾ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ) ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಕೂಗು ಕೇಳಿಬರುತ್ತಿದೆ. ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಸ್ತಿಪಟುಗಳಿಂದಲೇ ಪ್ರತಿಭಟನಾ ಧರಣಿ ನಡೆಯುತ್ತಿದೆ. ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶಾ ಫೋಗಟ್, ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಅವರು ಧರಣಿಯ ನೇತೃತ್ವ ವಹಿಸಿದ್ದಾರೆ. 


ಸುಪ್ರೀಂ ಕೋರ್ಟಿನ ಮಧ್ಯ ಪ್ರವೇಶದ ನಂತರವಷ್ಟೇ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ 2 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಒಂದು ಜಾಮೀನು ರಹಿತ ಪೋಕ್ಸೋ ಕೇಸ್ ಆಗಿದ್ದರೂ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಇನ್ನೂ ಬಂಧಿಸಿಲ್ಲ.

ಸರಕಾರ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಯಾವ ಕಾರಣಕ್ಕೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಬಗ್ಗೆ ದೇಶದ ಪ್ರಜೆಗಳು ಯೋಚಿಸಬೇಕಾಗಿದೆ.

ಉತ್ತರ ಪ್ರದೇಶದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಬ್ರಿಜ್ ಭೂಷಣ್ ಸಿಂಗ್ ಬಲಾಢ್ಯರಾಗಿದ್ದಾರೆ, ಹಲವು ಸಾಧು ಸಂತರೊಂದಿಗೆ ಉತ್ತಮ ಬಾಂಧವ್ಯ ಇರುವ ಇವರು ಆಯೋಧ್ಯ ಆಂದೋಲನದಲ್ಲಿಯೂ ಗುರುತಿಸಲ್ಪಟ್ಟವರಾಗಿದ್ದು, ಬಿಜೆಪಿಯ ಇತರ ಹಲವು ಸಂಸದರಿಗಿಂತ ಹೆಚ್ಚು ಪ್ರಭಾವಿ ವ್ಯಕ್ತಿ. ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳುತ್ತಿದ್ದರೂ, ಬ್ರಿಜ್ ಭೂಷಣ್ ಸಿಂಗ್ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ಸೋಜಿಗ ಎನಿಸಿದೆ.

2011ರಲ್ಲಿ ಭಾರತೀಯ ಕುಸ್ತಿ ಫೆಡರೇಶನ್ನಿನ ಅಧ್ಯಕ್ಷರಾಗುವುದಕ್ಕೂ ಮುಂಚೆಯೇ ಸಿಂಗ್ ವಿರುದ್ಧ ಹಲವು ಪ್ರಕರಣಗಳಿದ್ದವು. ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷ ಹೆಚ್ಚು ಪಾರಮ್ಯಕ್ಕೆ ಬರುವ ಮೊದಲೇ ಬ್ರಿಜ್ ಭೂಷಣ್ ಸಿಂಗ್ ಅಯೋಧ್ಯ ಆಂದೋಲನದ ಮೂಲಕ ಬಿಜೆಪಿಗೆ ಉತ್ತರ ಪ್ರದೇಶದ ವನ್ ಮ್ಯಾನ್ ಆರ್ಮಿ ಎಂಬಂತಿದ್ದರು.

ಅಯೋಧ್ಯ ಆಂದೋಲನದ ಸಂದರ್ಭದಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಗೋಂಡಾಕ್ಕೆ ಬಂದಾಗ ಬ್ರಿಜ್ ಭೂಷಣ್ ರಾಜಕೀಯ ಪ್ರವೇಶ ಮಾಡಿದ್ದರು. ಅಡ್ವಾಣಿಯವರ ರಥ ಮುನ್ನಡೆಸುವ ಜವಾಬ್ದಾರಿ ಹೊತ್ತ ಬ್ರಿಜ್ ಭೂಷಣ್ ಈ ಮೂಲಕ ಹೆಸರುವಾಸಿಯಾದರು.

1991ರಲ್ಲಿ ರಾಜಾ ಆನಂದ್ ಸಿಂಗ್ ಅವರನ್ನು ಸೋಲಿಸಿ ಮೊದಲ ಚುನಾವಣೆಯನ್ನು ಗೆದ್ದರು. ಮುಂದಿನ ವರ್ಷ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಯಾದ ಬ್ರಿಜ್ ಭೂಷಣ್ ಅವರಿಗೆ ಹಿಂದುತ್ವ ಪರ ಇಮೇಜ್ ಬಂತು. 2020ರಲ್ಲಿ ಪ್ರಕರಣದಿಂದ ಖುಲಾಸೆಯಾಯಿತು.

ಗೋಂಡಾ, ಬಲರಾಮ್ ಪುರ, ಕೈಸರ್ ಗಂಜ್ ಪ್ರದೇಶದಿಂದ 6 ಬಾರಿ ಸಂಸದನಾಗಿ ಆಯ್ಕೆಯಾದ ಬ್ರಿಜ್ ಭೂಷಣ್ ಸಿಂಗ್, ಸ್ಥಳೀಯ ಮಾಫಿಯಾ ಆಗಿರುವುದೂ ಹೌದು. ಒಂದು ಸಂದರ್ಭದಲ್ಲಿ ಬ್ರಿಜ್ ಭೂಷಣ್ ಸಿಂಗ್ ಮೇಲೆ 3 ಡಜನ್ ಗಿಂತಲೂ ಹೆಚ್ಚು ಕ್ರಿಮಿನಲ್ ಕೇಸುಗಳಿದ್ದವು.

1996ರಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಬಂಟರಿಗೆ ಆಶ್ರಯ ನೀಡಿದ ರೋಪದ ಮೇಲೆ ಟಾಡಾ ಕಾಯ್ದೆಯಡಿ ಬ್ರಿಜ್ ಭೂಷಣ್ ಸಿಂಗ್ ಜೈಲು ಸೇರಿದ್ದರು. ಮುಂದೆ ಸಾಕ್ಷ್ಯಗಳಿಲ್ಲದೆ ಖುಲಾಸೆಗೊಂಡಿದ್ದರು.

1996ರಲ್ಲಿ ಬ್ರಿಜ್ ಭೂಷಣ್ ಜೈಲಿನಲ್ಲಿದ್ದಾಗ ಅವರ ಪತ್ನಿ ಕೇತಕಿ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಆಕೆಯೂ ಗೆದ್ದು ಬಂದಿದ್ದಳು. ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ರಾಜಪೂತರ ನಡುವೆ ಬ್ರಿಜ್ ಭೂಷಣ್ ಗೆ ಇರುವ ಪ್ರಭಾವದಿಂದಾಗಿ ಅವರಿಗೆ ರಾಜಕೀಯವಾಗಿ ರಕ್ಷಣೆ ಸಿಗುತ್ತಿದೆ ಎನ್ನಲಾಗುತ್ತದೆ. ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕಡೆಗಣಿಸಿದರೆ ಅಲ್ಲಿ ಪಕ್ಷ ಸೀಟುಗಳನ್ನು ಕಳಕೊಳ್ಳುವುದು ಖಂಡಿತಾ ಎಂಬುದು ಕೂಡಾ ತಿಳಿದಂತಿದೆ.

2022ರ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಟಿವಿ ಚಾನೆಲ್ಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಕೊಲೆ ಮಾಡಿದ್ದ ಬಗ್ಗೆಯೂ ಮುಕ್ತವಾಗಿ ಹೇಳಿಕೊಂಡಿದ್ದರು.! ರವೀಂದ್ರ ಸಿಂಗ್ ಅವರನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ತಾನು ಗುಂಡಿಕ್ಕಿ ಕೊಂದೆ ಎಂದು ಬ್ರಿಜ್ ಭೂಷಣ್ ಹೇಳಿಕೊಂಡಿದ್ದರು.

2009ರಲ್ಲಿ ಬಿಜೆಪಿ ಬಿಟ್ಟು ಸಮಾಜವಾದಿ ಪಾರ್ಟಿ ಸೇರಿದ್ದ ಬ್ರಿಜ್ ಭೂಷಣ್ 2014ರಲ್ಲಿ ನರೇಂದ್ರ ಮೋದಿ ಜಯಗಳಿಸುವ ಮೊದಲು ಬಿಜೆಪಿಗೆ ಮರಳಿದ್ದರು. ಬಿಜೆಪಿಯೊಳಗೆ ಬ್ರಿಜ್ ಭೂಷಣ್ ಪ್ರಭಾವ ಹೆಚ್ಚಿದಂತೆಲ್ಲಾ ಅವರ ‘ಉದ್ಯಮ’ ಕೂಡಾ ಗಣನೀಯವಾಗಿ ಬೆಳೆದಿದೆ.

ಸುಮಾರು 50ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ಹೊಂದಿರುವ ಬ್ರಿಜ್ ಭೂಷಣ್ ಸಿಂಗ್, ಗಣಿಗಾರಿಕೆ, ಅಬಕಾರಿ ಗುತ್ತಿಗೆ, ಕಲ್ಲಿದ್ದಲು ಉದ್ಯಮ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಇದ್ದಾರೆ. ಪ್ರತೀ ವರ್ಷ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಬೆಂಬಲಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಮೋಟರ್ ಸೈಕಲ್, ಸ್ಕೂಟರ್, ಹಣ ಇತ್ಯಾದಿ ಉಡುಗೊರೆಯಾಗಿ ಕೊಡುತ್ತಿದ್ದರು.

2011ರಲ್ಲಿ ಭಾರತೀಯ ಕುಸ್ತಿ ಫೆಡರೇಶನ್ನಿನ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಸಿಂಗ್ ಆಯ್ಕೆಯಾದರು. 2021 ಡಿಸೆಂಬರ್ ತಿಂಗಳಲ್ಲಿ ರಾಂಚಿಯಲ್ಲಿ ನಡೆದ ಕಾರ್ಯಕ್ರಮವೊದರಲ್ಲಿ ರೆಸ್ಲರ್ ಒಬ್ಬರಿಗೆ ವೇದಿಕೆಯ ಮೇಲೆಯೇ ಕಪಾಳಮೋಕ್ಷ ಮಾಡಿ ವಿವಾದ ಸೃಷ್ಟಿಸಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾಲು ಮುಟ್ಟಿ ನಮಸ್ಕರಿಸುವ ವಿಚಾರದಲ್ಲಿ ಮುಕ್ತವಾಗಿ ವಿರೋಧ ವ್ಯಕ್ತಪಡಿಸಿದ ಬ್ರಿಜ್ ಭೂಷಣ್ ಅವರು, ಪ್ರವಾಹ ನಿರ್ವಹಣೆಯ ಬಗ್ಗೆ ಸರಕಾರದ ವಿಫಲತೆಯ ಬಗ್ಗೆ ಕಿಡಿಕಾರಿದ್ದರು.

ಹಾಗಿದ್ದರೂ ಮಾಫಿಯಾ ವಿರುದ್ಧ ಬುಲ್ಡೋಜರ್ ಚಲಾಯಿಸುವ ಖ್ಯಾತಿ ಹೊಂದಿರುವ ಯೋಗಿ ಆದಿತ್ಯನಾಥ್ ಅವರು ಬ್ರಿಜ್ ಬೂಷಣ್ ಬಗ್ಗೆ ಸೊಲ್ಲೆತ್ತದಿರುವುದು ಸೋಜಿಗದ ಸಂಗತಿಯಾಗಿದೆ.

ಈ ಎಲ್ಲಾ ಕಾರಣಗಳಿಂದ ಬ್ರಿಜ್ ಭೂಷಣ್ ಸಿಂಗ್ ಪಕ್ಷದ ವರಿಷ್ಟರಿಗಾಗಲೀ, ಯಾರಿಗೂ ಭಯಪಟ್ಟಂತಿಲ್ಲ. ಬ್ರಿಜ್ ಭೂಷಣ್ ಅವರನ್ನು ಠೀಕಿಸುವ ಧೈರ್ಯ ಯಾರೂ ಮಾಡುತ್ತಿಲ್ಲ. ಪತ್ರಕರ್ತರು ಕೂಡಾ ಬ್ರಿಜ್ ಭೂಷಣ್ ಅವರ ತಂಟೆಗೆ ಹೋಗದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಲೋಕಸಭಾ ಚುನಾವಣೆಯೂ ಹೊಸ್ತಿಲಲ್ಲಿರುವ ಕಾರಣಕ್ಕೆ ಬಿಜೆಪಿಯೂ ಬ್ರಿಜ್ ಬೂಷಣ್ ವಿರುದ್ಧ ಮಾತನಾಡುವಂತಿಲ್ಲ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ಅವರು ಠಾಕೂರ್ ಸಮುದಾಯದವರಾಗಿದ್ದರೂ, ರಾಜ್ಯ ರಾಜಕಾರಣದಲ್ಲಿ ಬ್ರಿಜ್ ಭೂಷಣ್ ಸಿಂಗ್ ಹೆಚ್ಚು ಪ್ರಬಾವಿ ಠಾಕೂರ್ ಎನ್ನಲಾಗುತ್ತದೆ.

Previous Post Next Post

Contact Form