ಅಯೋಧ್ಯಾ (ಐಎಎನ್ಎಸ್): ಶಾಲಾ ಆವರಣದಲ್ಲಿಯೇ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣದಲ್ಲಿ, ಉತ್ತರ ಪ್ರದೇಶದ ಅಯೋಧ್ಯಾ ಜಿಲ್ಲೆಯ ಖಾಸಗಿ ಶಾಲೆಯ ಪ್ರಾಂಶುಪಾಲ ಮತ್ತು ಇಬ್ಬರು ಸಿಬ್ಬಂಧಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಶನಿವಾರ ಚಿಕಿತ್ಸೆಯ ಸಂದರ್ಭದಲ್ಲಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ವಿದ್ಯಾರ್ಥಿನಿಯ ತಂದೆಯ ಹೇಳಿಕೆಯ ಪ್ರಕಾರ ಶಾಲಾ ರಜಾದಿನಗಳಿದ್ದರೂ, ಶುಕ್ರವಾರ ಬೆಳಗ್ಗೆ 8:30 ಗಂಟೆಗೆ 10ನೇ ತರಗತಿಯ ತಮ್ಮ ಮಗಳಿಗೆ ಪ್ರಾಂಶುಪಾಲರು ಕೌನ್ಸೆಲಿಂಗ್ ಗಾಗಿ ಶಾಲೆಗೆ ಬರಲು ತಿಳಿಸಿದ್ದರು ಎನ್ನಲಾಗಿದೆ.
ಬೆಳಗ್ಗೆ 9:50ರ ಸುಮಾರಿಗೆ ಶಾಲೆಯಿಂದ ನಿಮ್ಮ ಮಗಳು ಆಟವಾಡುವ ಉಯ್ಯಲೆಯಿಂದ ಬಿದ್ದಿದ್ದು ಆಸ್ಪತ್ರೆಗೆ ಕರೆದೊಯ್ದಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಸಿಸಿಟಿವಿ ನೋಡಿದಾಗ ಆಕೆ ಶಾಲಾ ಕಟ್ಟಡದ ಮೇಲಿಂದ ಬಿದ್ದಿರುವುದು ಕಂಡಿದೆ. ಆಕೆಯ ತಂದೆ ಆಸ್ಪತ್ರೆಗೆ ತಲುಪಿದಾಗ ವಿದ್ಯಾರ್ಥಿನಿಯು ಚಿಕಿತ್ಸೆಯ ವೇಳೆ ಅಸುನೀಗಿದ್ದಾಳೆ ಎಂದು ಹೇಳಲಾಯಿತು.
“ಮೇ 26ರ ಬೆಳಗ್ಗೆ 8.30ಕ್ಕೆ ತಮ್ಮ ಮಗಳಿಗೆ ಶಾಲೆಗೆ ಬರುವಂತೆ ಸಂಚು ಮಾಡಿ ಪ್ರಾಂಶುಪಾಲರು ಕರೆಮಾಡಿದ್ದು, ಅಲ್ಲಿಗೆ ತಲುಪಿದಾಗ ಇಬ್ಬರು ಶಿಕ್ಷಕರು ತಮ್ಮ ಮಗಳಿಗೆ ಅತ್ಯಾಚಾರ ಮಾಡಿ, ತಮ್ಮ ಕೃತ್ಯವನ್ನು ಮುಚ್ಚಿಡಲು ಮಗಳನ್ನು ಶಾಲಾ ಕಟ್ಟಡದ ಮೇಲಿಂದ ದೂಡಿ ಕೊಲೆ ಮಾಡಿದ್ದಾರೆ” ಎಂದು ಮೃತ ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತಂದೆ ನೀಡಿದ ದೂರಿನಂತೆ ಪೊಲೀಸರು ಐಪಿಸಿ 376-ಡಿ (ಸಾಮೂಹಿಕ ಅತ್ಯಾಚಾರ), 302 (ಕೊಲೆ), 201 ಮತ್ತು 120-ಬಿ ಹಾಗೂ ಪೋಕ್ಸೋ ಕಾನೂನಿನನ್ವಯ ಪ್ರಕರಣ ದಾಖಲಿಸಿದ್ದಾರೆ. ಮೂವರು ವೈದ್ಯರ ತಂಡ ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ್ದು, ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಶಯದ ಆಧಾರದಲ್ಲಿ ಶಾಲಾ ಕ್ರೀಡಾ ಶಿಕ್ಷಕನನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.