ಮೂಡುಬಿದಿರೆಯಲ್ಲಿ ನೀರಿಗೆ ಹಾಹಾಕಾರ: ನೀರಿಲ್ಲದೆ ಫ್ಲ್ಯಾಟ್ ಬಿಡುವ ಪರಿಸ್ಥಿತಿ

(ಸಾಂದರ್ಭಿಕ ಚಿತ್ರ)

ಮೂಡುಬಿದಿರೆ: ಪ್ರಖರ ಬಿಸಿಲು, ಮಳೆಯ ಸುದ್ದಿಯೇ ಇಲ್ಲ. ತೀರದ ದಾಹ, ಬಿಸಿಲಿನ ಝಳಕ್ಕೆ ವಿಪರೀತ ದಣಿವು. ಉರಿಬಿಸಿಲಿಗೆ ಹೊರಗಡೆ ಕೆಲಸ ಮಾಡುವ ಜನರಿಗೆಲ್ಲ ಮೈಯೆಲ್ಲಾ ಸುಟ್ಟಂತಹ ಅನುಭವ. ಆಟೋ, ವಾಹನ ಚಾಲಕರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಫೀಲ್ಡ್ ವರ್ಕ್ ಉದ್ಯೋಗಿಗಳು, ಚುನಾವಣಾ ಪ್ರಚಾರಕ್ಕೆ ಹೋಗಬೇಕಾದವರು ಇತ್ಯಾದಿ ಬಿಸಿಲಿನ ಬೇಗೆಗೆ ಬೆಂಡಾಗಿ ಹೋಗುತ್ತಿದ್ದಾರೆ.

ಅತ್ತ ಮೂಡುಬಿದಿರೆ ನಗರಕ್ಕೆ ಬಹುಪಾಲು ನೀರುಣಿಸುವ ಪುಚ್ಚಮೊಗರು ಅಣೆಕಟ್ಟಿನಲ್ಲಿರುವ ನೀರು ಕೆಲವೇ ದಿನಕ್ಕೆ ಮಾತ್ರ ಸಾಲುವಷ್ಟಿದೆ. ಇತ್ತ ನಗರಕ್ಕೆ ನೀರುಣಿಸುತ್ತಿದ್ದ ಹಲವು ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಕೆಲವು ಬಹುಮಹಡಿ ವಸತಿ ಸಮುಚ್ಛಯಗಳಲ್ಲಿ ನೀರಿಲ್ಲದೆ ಜನ ಫ್ಲ್ಯಾಟ್ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂಡುಬಿದಿರೆಯ ಕೆಲವು ಬಹುಮಹಡಿ ವಸತಿ ಸಮುಚ್ಛಯಗಳಿಗೆ ಪುರಸಭೆಯ ನೀರಿನ ಕನೆಕ್ಷನ್ ಇಲ್ಲ. ತಮ್ಮ ಸ್ವಂತ ಬೋರ್ ವೆಲ್ ಗಳಿಂದ ನೀರಿನ ವ್ಯವಸ್ಥೆರ ಮಾಡಿ ಕೊಂಡಿದ್ದಾರೆ. ಆದರೆ ಇದೀಗ ಕೆಲ ಕಟ್ಟಡಗಳ ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ವಿಪರೀತ ಕುಸಿದಿದೆ, ಕೆಲವು ಬೋರ್ ವೆಲ್ ಗಳಲ್ಲಿ ನೀರೇ ಇಲ್ಲ.

ಕೆಲವು ಫ್ಲ್ಯಾಟ್ ಗಳಲ್ಲಿ ಡ್ರೈನೇಜ್ ನೀರು ಮತ್ತು ಕುಡಿಯುವ ನೀರಿನ ಸಂಪ್ ಗಳಲ್ಲಿನ ನೀರು ಬೆರೆತು ಹೋಗಿರುವ ಉದಾಹರಣೆಗಳಿವೆ. ಹಾಗಾಗಿ ಕೆಲವೆಡೆ ಟ್ಯಾಂಕರ್ ನೀರು ತಂದು ಸಂಪ್ ಗೆ ಹಾಕುವಂತೆಯೂ ಇಲ್ಲ. ಹಾಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗದೆ ಹಲವಾರು ಫ್ಲ್ಯಾಟ್ ವಾಸಿಗರು ಬೇರೆಡೆ ಸ್ಥಳಾಂತರವಾಗಲು ಚಿಂತನೆ ನಡೆಸಿದ್ದಾರೆ.

ನಗರದ ಹಲವು ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದ್ದು, ಪುರಸಭೆ ಸಾಕಷ್ಟು ನೀರು ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಜೊತೆಗೆ ಖಾಸಗಿಯವರು ಕೂಡಾ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ.

ಆದರೂ ಇನ್ನಷ್ಟು ದಿನ ಮಳೆ ಬಾರದಿದ್ದರೆ ಪರಿಸ್ಥಿತಿ ಕೈಮೀರಲಿದೆ. ಹಾಗಾಗದಿರಲಿ, ಆದಷ್ಟು ಬೇಗ ಮಳೆ ಬರಲಿ ಎಂಬುದು ನಮ್ಮ ಆಸೆಯೂ ಹೌದು.

Previous Post Next Post

Contact Form