ರೀಟಾ ಡಿಸೋಜಾ ಅವರಿಗೆ ಗುರುವಂದನಾ ಕಾರ್ಯಕ್ರಮ


ಮೂಡುಬಿದಿರೆ: ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢ ಶಾಲೆ ನೀರ್ಕೆರೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಗೆಬೆಟ್ಟು ಶಾಲೆಗಳಲ್ಲಿ 28 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ರೀಟಾ ಡಿಸೋಜಾ ಅವರಿಗೆ ರೀಟಾ ಟೀಚರ್ ಶಿಷ್ಯವೃಂದ ಹಾಗೂ ಊರ ಮಹನೀಯರು ಗುರುವಂದನಾ ಕಾರ್ಯಕ್ರಮವನ್ನು ಅಶ್ವತ್ಥಪುರ ಸಂತೆಕಟ್ಟೆಯ ವಿವಿಧೋದ್ದೇಶ ಸಭಾಭವನದಲ್ಲಿ ಆಯೋಜಿಸಿದ್ದರು.

ನಿವೃತ್ತ ಮುಖ್ಯ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ನಾನು ಕಂಡ ಕೆಲವೇ ಕೆಲವು ಅತ್ಯುತ್ತಮ ಶಿಕ್ಷಕಿಯರಲ್ಲಿ ರೀಟಾ ಡಿಸೋಜಾ ಒಬ್ಬರು. ಬಡತನದಲ್ಲಿಯೇ ಬೆಳದು ಬಂದ ರೀಟಾ ಟೀಚರ್ ಅವರಿಗೆ ಇತರರ ಕಷ್ಟ ತಿಳಿದಿತ್ತು. ಅವರು ನೀರ್ಕೆರೆ ಶಾಲೆಗೆ ಬಂದ ಮೇಲೆ ಇಡೀ ಶಾಲೆಯ ಚಿತ್ರಣ ಬದಲಾಯಿತು. ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿಯಾಗಿದ್ದರೂ, ಆಂಗ್ಲ ಭಾಷೆಯಲ್ಲಿಯೂ ಹಿಡಿತ ಹೊಂದಿದ್ದ ರೀಟಾ ಟೀಚರ್, ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡವರು’ ಎಂದರು.

ಕಾರ್ಯಕ್ರಮದಲ್ಲಿ ರೀಟಾ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರೀಟಾ ಡಿಸೋಜಾ ಅವರು ‘ನನ್ನ ವಿದ್ಯಾರ್ಥಿಗಳು ಬೆಳೆದಿರುವುದನ್ನು ನೋಡಿದಾಗ ಮನಸ್ಸು ತುಂಬಿ ಬರುತ್ತದೆ. ಕನ್ನಡ ಮಾಧ್ಯಮದ ಮಕ್ಕಳು ನಿಜವಾದ ಆಲ್ ರೌಂಡರ್ ಗಳು. ಅವರಲ್ಲಿನ ಗುರುಭಕ್ತಿ, ವಿನಯ, ಸಂಸ್ಕೃತಿ ಅನುಕರಣೀಯ. ನಾನು ಯಾವ ಪ್ರಶಸ್ತಿಯನ್ನೂ ಬಯಸಲಿಲ್ಲ. ನನ್ನ ವಿದ್ಯಾರ್ಥಿಗಳೇ ನನ್ನ ನಿಜವಾದ ಪ್ರಶಸ್ತಿ’ ಎಂದರು.

ನೀರ್ಕೆರೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಎಚ್. ಮಾತನಾಡಿ ‘ಪ್ರತಿಯೊಬ್ಬರೂ ಬದುಕಿನಲ್ಲಿ ಕನಸು ಕಾಣುತ್ತಾರೆ. ಆದರೆ ಶಿಕ್ಷಕರು ಇತರರು ಕಂಡ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತಾರೆ. ಗುರು ಎಂತಹ ಕಲ್ಲನ್ನೂ ಶಿಲ್ಪವನ್ನಾಗಿಸುವ ಸಾಮರ್ಥ್ಯವುಳ್ಳವರು. ತನ್ನನ್ನು ತಾನು ಅರ್ಪಿಸಿಕೊಂಡವರು ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ.’ ಎಂದರು.

ಹಳೆ ವಿದ್ಯಾರ್ಥಿ ಸುದರ್ಶನ್ ಮಾತನಾಡಿ ‘ಮಾತೃ ಹೃದಯದ ರೀಟಾ ಟೀಚರ್ ಇಲ್ಲದಿರುತ್ತಿದ್ದರೆ ನನ್ನಂತಹ ಅದೆಷ್ಟೋ ವಿದ್ಯಾರ್ಥಿಗಳು ಹೈಸ್ಕೂಲ್ ಮೆಟ್ಟಿಲು ಹತ್ತಲಾಗುತ್ತಿರಲಿಲ್ಲ. ಬಡತನದ ಅರಿವಿದ್ದ ರೀಟಾ  ಟೀಚರ್ ಅವರು ತಮ್ಮದೇ ಹಣದಿಂದ ಬಡ ವಿದ್ಯಾರ್ಥಿಗಳಿಗೆ ಬಟ್ಟೆಗಳನ್ನೂ ಕೊಡುತ್ತಿದ್ದರು ಮಾತ್ರವಲ್ಲ ಶಿಕ್ಷಣದ ಬಗ್ಗೆ ವೈಯುಕ್ತಿಕ ಗಮನವನ್ನೂ ಕೊಡುತ್ತಿದ್ದರು’ ಎಂದು ಸ್ಮರಿಸಿದರು.

ಶಿಕ್ಷಕರ ಕೊರತೆಯಿದ್ದರೂ ನೀರ್ಕೆರೆ ಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ 7 ಬಾರಿ 100% ಫಲಿತಾಂಶ ಬರಲು ರೀಟಾ ಟೀಚರ್ ಶ್ರಮಿಸಿದ್ದರು. 3 ಬಾರಿ ನೀರ್ಕೆರೆ ಶಾಲೆ ಮೂಡುಬಿದಿರೆ ವಲಯದ ಸರಕಾರಿ ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿತ್ತು.

ಕಾರ್ಯಕ್ರಮದಲ್ಲಿ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಉಮಾವತಿ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ಹಸ್ತಾಂತರಿಸಲಾಯಿತು.

ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕ ಗುರುಪ್ರಸಾದ್, ತೆಂಕಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್,  ನೀರ್ಕೆರೆ ಗುತ್ತು ಅಜಿತ್ ರಾವ್ ಜೈನ್, ಶಿಕ್ಷಕ ಮೆಲ್ವಿನ್ ಅಲ್ಬುಕರ್ಕ್ ಉಪಸ್ಥಿತರಿದ್ದರು.

ಮಂಜುನಾಥ್ ಸ್ವಾಗತಿಸಿದರು. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಲಿಂಗಪ್ಪ ಗೌಡ ನೀರ್ಕೆರೆ ವಂದಿಸಿದರು.

ವಿದ್ಯಾಭಿಮಾನಿ ಡ್ಯಾನ್ಸ್ ಕ್ಲಾಸ್ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.

Previous Post Next Post

Contact Form