ಪತ್ರಕರ್ತ ಅರ್ಫಾಜ್ ಅಹ್ಮದ್ ಡೇಯಿಂಗ್ ಅವರ ಮನೆಯನ್ನು ಅಧಿಕಾರಿಗಳು ಗುರುವಾರ ನೆಲಸಮ ಮಾಡಿದ್ದು, ಈ ಘಟನೆ ಬಳಿಕ ಜಮ್ಮುವಿನ ನಿವಾಸಿ ಕುಲದೀಪ್ ಶರ್ಮಾ ಅವರು ಡೇಯಿಂಗ್ ಅವರಿಗೆ ಐದು ಮಾರ್ಲಾ ನಿವೇಶನವನ್ನು ಮಾನವೀಯತೆಗೆ ಸೂಚಕವಾಗಿ ಉಡುಗೊರೆಯಾಗಿ ನೀಡಿದ್ದಾರೆ.
ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವ ಮೂಲಕ ಮನೆಯನ್ನು ನಿರ್ಮಿಸಲಾಗಿದೆ ಎಂಬ ಆರೋಪದ ಮೇರೆಗೆ ಆಡಳಿತವು ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತ ಡೇಯಿಂಗ್ ಅವರ ಮನೆಯನ್ನು ಧ್ವಂಸ ಮಾಡಿತ್ತು. ಆದರೆ, ಇತ್ತೀಚೆಗೆ ಗಡಿಯಾಚೆಗಿನ ದೊಡ್ಡ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾದ ಶಂಕಿತ ಕಳ್ಳಸಾಗಣೆದಾರರೊಂದಿಗೆ ಪೊಲೀಸ್ ಅಧಿಕಾರಿಯ ಸಂಪರ್ಕವಿದೆ ಎಂಬ ವರದಿ ಪ್ರಕಟಿಸಿದ್ದಕ್ಕೆ ಪ್ರತೀಕಾರವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡೇಯಿಂಗ್ ಆರೋಪಿಸಿದ್ದಾರೆ. ಅವರು ‘ನೀಸ್ ಸೆಹರ್ ಇಂಡಿಯಾ’ ಎಂಬ ಡಿಜಿಟಲ್ ಸುದ್ದಿ ಪೋರ್ಟಲ್ನ್ನು ನಡೆಸುತ್ತಿದ್ದಾರೆ.
ಮನೆ ಧ್ವಂಸದಿಂದ ಡೇಯಿಂಗ್ ಅವರ ವೃದ್ಧ ಪೋಷಕರು, ಪತ್ನಿ ಹಾಗೂ ಮೂವರು ಮಕ್ಕಳು ತಾತ್ಕಾಲಿಕವಾಗಿ ನಿರಾಶ್ರಿತರಾಗಿದ್ದಾರೆ. ಕುಟುಂಬವು ಹೆಚ್ಚಿನ ಸಮಯ ಕೇಳಿಕೊಂಡರೂ ಅಧಿಕಾರಿಗಳು ಒಪ್ಪದೆ ಕಾರ್ಯಾಚರಣೆಯನ್ನು ಮುಂದುವರಿಸಿದಂತೆಯೇ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದಾರೆ.
"ಅರ್ಫಾಜ್ಗೆ 5 ಮಾರ್ಲಾ ಭೂಮಿಯನ್ನು ನಾನು ಉಡುಗೊರೆಯಾಗಿ ನೀಡಿದ್ದೇನೆ. ಇದರ ಎಲ್ಲಾ ಕಂದಾಯ ದಾಖಲೆಗಳನ್ನು ಸರಿಯಾಗಿ ಮಾಡಿಸಿದ್ದೇನೆ. ನನ್ನ ಸಹೋದರನಂತೆ ಇರುವ ಪತ್ರಕರ್ತ ಅಸಹಾಯಕನಾಗಬಾರದು ಎನ್ನುವ ಕಾರಣದಿಂದ ನಾನು ಈ ಭೂಮಿ ನೀಡುತ್ತಿದ್ದೇನೆ," ಎಂದು ಕುಲದೀಪ್ ಶರ್ಮಾ ತಿಳಿಸಿದ್ದಾರೆ.
