ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಎಂಬ ಕಾರ್ಮಿಕನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಚಿದಾನಂದ ಪರಶುನಾಯ್ಕರ್ ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
೨ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ಅವರು ಪ್ರಕರಣದ ಸಾಕ್ಷೀದಾರರ ವಿಚಾರಣೆ ನಡೆಸಿ, ಆರೋಪ ಸಾಬೀತಾಗಿದ್ದು ಚಿದಾನಂದ ಪರಶುನಾಯ್ಕ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಚಿದಾನಂದ ಮತ್ತು ಚೇತನ್ ಅವರ ಮಧ್ಯೆ ಭಿನ್ನಾಭಿಪ್ರಾಯವಿದ್ದು ೨೦೨೦ರ ಅಕ್ಟೋಬರ್ ೩೦ರ ರಾತ್ರಿ ಚಿದಾನಂದ ಅವರು ಸಿಬ್ಬಂದಿಗಳ ವಿಶ್ರಾಂತಿ ಕೊಠಡಿಗೆ ನುಗ್ಗಿ ಕಬ್ಬಿಣದ ರಾಡ್‌ನಿಂದ ಮುಖಕ್ಕೆ, ತಲೆಗೆ ಹೊಡೆದಿದ್ದ. ರಾಜೇಶ್ ಮತ್ತು ಶಂಕರ್ ಎಂಬ ಇತರರು ಬಿಡಿಸಲು ಪ್ರಯತ್ನಿಸಿದರೂ ಆರೋಪಿ ಹೊಡೆದ ಏಟಿಗೆ ತಲೆಯಿಂದ ತೀವ್ರ ರಕ್ತಸ್ತ್ರಾವವಾಗಿತ್ತು. ಚೇತನ್ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು.
ತನಿಖಾಧಿಕಾರಿಯಾಗಿದ್ದ ಠಾಣಾ ನಿರೀಕ್ಷಕ ದಿನೇಶ್ ಮತ್ತು ತನಿಖಾ ಸಹಾಯಕ ಕಾಂತಪ್ಪ ಅವರು ೪೦ ಜನ ಸಾಕ್ಷಿಗಳ ವಿಚಾರಣೆ ನಡೆಸಿ, ಸಾಕ್ಷ್ಯಾಧಾರಗಳ ಸಹಿತ ಅಂತಿಮ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸರಕಾರಿ ವಕೀಲರಾದ ಜ್ಯೋತಿ ನಾಯಕ್ ಅವರು ವಾದ ಮಂಡಿಸಿ ಆರೋಪ ಸಾಬೀತುಪಡಿಸಿದ್ದರು. ಠಾಣಾ ಸಿಬ್ಬಂಧಿ ಅಶೋಕ ಅವರು ಸಾಕ್ಷಿಗಳನ್ನು ಸಮರ್ಪಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಹಕರಿಸಿದ್ದು, ಆರೋಪಿ ಚಿದಾನಂದ ಅವರಿಗೆ ಜೀವಾವಧಿ ಶಿಕ್ಷೆ ಆಗಿದೆ.
