ಮಂಗಳೂರು: ವಿದ್ಯಾರ್ಥಿಗಳ ಅಭಾವದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು 2025–26 ಶೈಕ್ಷಣಿಕ ಸಾಲಿನಲ್ಲಿ ನಾಲ್ಕು ಸ್ನಾತಕೋತ್ತರ (ಪಿಜಿ) ಪಠ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಕೆಲವೇ ವರ್ಷಗಳ ಹಲವು ವಿದ್ಯಾರ್ಥಿಗಳೊಂದಿಗೆ ಯಶಸ್ವಿ ಶಿಕ್ಷಣ ನೀಡುತ್ತಿದ್ದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ಯಾಕೆ ಬರುತ್ತಿಲ್ಲ ಎಂಬುದು ಯೋಚಿಸಬೇಕಾದ ವಿಚಾರ.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂ.ಸಿ.ಜೆ), ಎಂ.ಎಸ್ಸಿ. ಎಲೆಕ್ಟ್ರಾನಿಕ್ಸ್, ಎಂ.ಎಸ್ಸಿ ಸ್ಟಾಟಿಸ್ಟಿಕ್ಸ್, ಎಂ.ಎಚ್.ಆರ್.ಡಿ. ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ ಈ ಸ್ನಾತಕೋತ್ತರ ವಿಬಾಗಗಳನ್ನು 2025-26ನೇ ವರ್ಷಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಶೇಷವೆಂದರೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಶಿಕ್ಷಣ ಪಡೆದ ಹಲವು ಮಂದಿ ಯಶಸ್ವಿ ಪತ್ರಕರ್ತರಾಗಿ ರಾಜ್ಯ ಮತ್ತು ರಾಷ್ಟ್ರದ ಪತ್ರಿಕೋದ್ಯಮ ರಂಗದಲ್ಲಿ ಮಿಂಚಿದ್ದಾರೆ. ಆದರೆ ಇವತ್ತು ಇದೇ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಬರುತ್ತಿಲ್ಲ ಎಂದರೆ ಎಲ್ಲಿ ತಪ್ಪಾಗಿದೆ ಎಂದು ಅವಲೋಕಿಸಬೇಕಲ್ಲಾ?
ಹಲವು ಸರಕಾರಿ ಶಾಲೆಗಳು ಹೇಗೂ ಹಂತ ಹಂತವಾಗಿ ಅಳಿವಿನ ಅಂಚಿನಲ್ಲಿವೆ. ಮಂಗಳೂರು ವಿಶ್ವವಿದ್ಯಾನಿಲಯವೂ ಅದೇ ದಾರಿಯಲ್ಲಿ ಸಾಗುತ್ತಿದೆಯಾ ಎಂದು ಯೋಚಿಸಬೇಕಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ಉನ್ನತಿಯತ್ತ ಸಾಗುತ್ತಿರುವಾಗ ಸರಕಾರ ಪ್ರಾಯೋಜಿತ ಶಿಕ್ಷಣಕ್ಕೆ ಗ್ರಹಣ ಬಡಿದಿರುವುದು ಯಾಕೆ? ಸರಕಾರದ ಅಸಡ್ಡೆಯಾ? ಅಥವಾ ಶಿಕ್ಷಣದ ಖಾಸಗೀಕರಣಕ್ಕೆ ಸರಕಾರವೇ ಪರೋಕ್ಷ ಬೆಂಬಲ ನೀಡುತ್ತಿದೆಯಾ? ಯೋಚಿಸಬೇಕಾದ ಸಂಗತಿ.
ವಿಶ್ವವಿದ್ಯಾಲಯದ ಮೂಲಗಳ ಪ್ರಕಾರ, ಈ ಪಠ್ಯಕ್ರಮಗಳಲ್ಲಿ ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಅತ್ಯಲ್ಪವಾಗಿದ್ದು, ಕೆಲವು ವಿಭಾಗಗಳಿಗೆ ಕೇವಲ 1–2 ಅರ್ಜಿಗಳು ಮಾತ್ರ ಬಂದಿದ್ದವು, ಕೆಲವು ಶೂನ್ಯ ದಾಖಲೆಗಳನ್ನೇ ಕಂಡಿವೆ. ವಿಶ್ವವಿದ್ಯಾಲಯವು ಒಂದು ಪಠ್ಯಕ್ರಮ ಪ್ರಾರಂಭಿಸಲು ಕನಿಷ್ಠ 15 ವಿದ್ಯಾರ್ಥಿಗಳ ಮಾನದಂಡವನ್ನು ನಿಗದಿಪಡಿಸಿತ್ತು. ಬಳಿಕ ಅದನ್ನು 10ಕ್ಕೆ ಇಳಿಸಿದರೂ ಸಹ, ಈ ನಾಲ್ಕು ಕೋರ್ಸ್ಗಳು ಅಗತ್ಯ ದಾಖಲಾತಿ ಸಂಖ್ಯೆಯನ್ನು ತಲುಪಲಿಲ್ಲ.
ಕೆಲವು ವಿಭಾಗಗಳಲ್ಲಿ ಶಾಶ್ವತ ಬೋಧಕ ಸಿಬ್ಬಂದಿಯ ಕೊರತೆ ಕೂಡ ಇದಕ್ಕೆ ಕಾರಣವಾಗಿದೆ. ಉದಾಹರಣೆಗೆ, ಸ್ಟಾಟಿಸ್ಟಿಕ್ಸ್ ಮತ್ತು ಎಚ್ಆರ್ಡಿ ವಿಭಾಗಗಳಲ್ಲಿ ಪರ್ಮನೆಂಟ್ ಅಧ್ಯಾಪಕರಿಲ್ಲದಿರುವುದರಿಂದ ಪಠ್ಯಕ್ರಮ ನಿರ್ವಹಣೆ ಕಷ್ಟವಾಗುತ್ತಿದೆ.
ಆದಾಗ್ಯೂ, ಈ ಕೋರ್ಸ್ಗಳನ್ನು ಶಾಶ್ವತವಾಗಿ ರದ್ದುಗೊಳಿಸದೆ “ಸಸ್ಪೆಂಡೆಡ್ ಅನಿಮೇಶನ್” ಸ್ಥಿತಿಯಲ್ಲಿ ಇರಿಸಲಾಗಿದ್ದು, ಭವಿಷ್ಯದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾದರೆ ಪುನಃ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವಿಶ್ವವಿದ್ಯಾಲಯವು ಸ್ಪಷ್ಟಪಡಿಸಿದೆ.
ಸರಕಾರ ಮತ್ತು ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ವಿಶ್ವವಿದ್ಯಾನಿಲಯದ ಆಡಳಿತ ವರ್ಗ ಈ ಬಗ್ಗೆ ಗಂಭೀರವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗುವ ಅಗತ್ಯತೆ ಇದೆ.
