ಆನ್ಲೈನ್ ವಂಚನೆ ಪ್ರಕರಣದಲ್ಲಿ ಖಾಸಗಿ ಶಾಲೆಯೊಬ್ಬ ಶಿಕ್ಷಕಿಗೆ 20 ಲಕ್ಷ ರೂ. ಮೋಸ ಮಾಡಿದ ಆರೋಪದಲ್ಲಿ ಸೈಬರ್ ಕ್ರೈಮ್ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಕೋಲಾರ ಮಾಲೂರು ಮೂಲದ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ ನಕಲಿ ಮಿಶೋ ಗಿಫ್ಟ್ ಕಾರ್ಡ್ ಕಳುಹಿಸಿ, ಅದರಲ್ಲಿ ರೂ. 10,50,000 ನಗದು, 150 ಗ್ರಾಂ ಚಿನ್ನ, ಎರಡು ಐಫೋನ್ ಲಾಟರಿ ಗೆದ್ದಿರುವುದಾಗಿ ಸುಳ್ಳು ಆಮಿಷವೊಡ್ಡಲಾಗಿತ್ತು. ಇದನ್ನು ನಂಬಿದ ಶಿಕ್ಷಕಿ ಪ್ರೊಸೆಸಿಂಗ್ ಶುಲ್ಕ, ತೆರಿಗೆ, ಲೀಗರಿಟಿ ಫೀ ಮೊದಲಾದ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು ರೂ 20 ಲಕ್ಷವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.
ಘಟನೆ ಕುರಿತು ದೂರು ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡ ಸೈಬರ್ ಕ್ರೈಮ್ ಪೊಲೀಸರು, ಬೆಂಗಳೂರು ಮೂಲದ ಈ ವಂಚನಾ ಜಾಲವನ್ನು ಪತ್ತೆಹಚ್ಚಿ ಆರೋಪಿಗಳಾದ ರಾಧಾ @ ಪಾವನಾ ಹಾಗೂ ಸತೀಶ್ ಎಂಬ ದಂಪತಿಯನ್ನು ಬಂಧಿಸಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಇವರು ಇದೇ ರೀತಿಯ ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಪೋಸ್ಟ್ ಮೂಲಕ ಮೀಶೋ ಆನ್ ಲೈನ್ ಪ್ರೈವೇಟ್ ಲಿಮಿಟೆಡ್ ಲೆಟರ್ಹೆಡ್ ಹೊಂದಿದ ನಕಲಿ ಗಿಫ್ಟ್ ಕಾರ್ಡ್ ಕಳುಹಿಸಿ, ಪಡೆದ ಹಣವನ್ನು ಐಶಾರಾಮಿ ಜೀವನಕ್ಕೆ ಬಳಸಿಕೊಂಡಿರುವುದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
