ಲಕ್ನೋ: 5 ವರ್ಷದ ಮಗುವೊಂದು ಆಟವಾಡುತ್ತಾ ಅಯಸ್ಕಾಂತ ನುಂಗಿದ ಘಟನೆ ಶನಿವಾರ ಲಕ್ನೋದಲ್ಲಿ ನಡೆದಿದೆ.
![]() |
(ಸಾಂದರ್ಭಿಕ
ಚಿತ್ರ) |
ಉತ್ತರ ಪ್ರದೇಶ ಬಿಜೆಪಿ ಪ್ರದಾನ ಕಾರ್ಯದರ್ಶಿ ಅಮರಪಾಲ್ ಮೌರ್ಯ ಅವರ ಪುತ್ರ ಪಾರ್ಥ ಸಾರಥಿಯನ್ನು ಕೂಡಲೇ ರಾಮ್ ಮನೋಹರ್ ಆರೋಗ್ಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ತರಲಾಗಿದ್ದು, ಇದೀಗ ವೈದ್ಯರು ಮಗುವನ್ನು ಡಿಸ್ಚಾರ್ಜ್ ಮಾಡಿದ್ದಾರೆ.
ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಆಟವಾಡುತ್ತಿದ್ದ ಮಗು ಅಕಸ್ಮಾತ್ ಅಯಸ್ಕಾಂತವನ್ನು ನುಂಗಿದ್ದು, ಅನಂತರ ಉಸಿರಾಟದ ಸಮಸ್ಯೆ ಎದುರಾಗಿದೆ.
ಆಸ್ಪತ್ರೆಯಲ್ಲಿ ಕೂಡಲೇ ಎಕ್ಸ್-ರೇ ಮಾಡಿದ್ದು ಬಾಲಕನ ಹೊಟ್ಟೆಯಲ್ಲಿ ಸುಮಾರು ಒಂದು ಇಂಚು ಉದ್ದದ ಅಯಸ್ಕಾಂತ ಇರುವುದು ಕಂಡು ಬಂದಿದೆ ಎಂದು ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ| ವಿಕ್ರಂ ಸಿಂಗ್ ತಿಳಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ ಎಂದಿರುವ ವೈದ್ಯರು, ಮಲದೊಂದಿಗೆ ಅಯಸ್ಕಾಂತ ಹೊರಹೋಗುವ ಬಗ್ಗೆ ತಿಳಿಸಿದ್ದಾರೆ. ಅದಾಗ್ಯೂ ಪುನಃ ನೋವು ಕಂಡು ಬಂದರೆ ಚಿಕಿತ್ಸೆ ನೀಡಬೇಕಾಗುತ್ತದೆ. ಮಗದೊಮ್ಮೆ ಎಕ್ಸ್-ರೇ ಮಾಡಿ ಪರಿಸ್ಥಿತಿಯ ಬಗ್ಗೆ ಖಚಿತ ಪಡಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.