ಭೋಪಾಲ್ : ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಶಾಲೆಯೊಂದರಲ್ಲಿ ಅನಿರೀಕ್ಷಿತ ತಪಾಸಣೆಯ ವೇಳೆ ಪ್ರಾಂಶುಪಾಲರ ಕೊಠಡಿಯಲ್ಲಿ ಕಾಂಡೋಮ್, ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಅಧಿಕಾರಿಗಳು ಶಾಲೆಯನ್ನು ಸೀಲ್ ಮಾಡಿದ ಘಟನೆ ನಡೆದಿದೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿಕಾರಿಗಳು ಶನಿವಾರ ಅನಿರೀಕ್ಷಿತ ತಪಾಸಣೆಯನ್ನು ಕೈಗೊಂಡಿದ್ದರು. ತಪಾಸಣೆಯ ವೇಳೆ ಕಾಂಡೋಮ್, ಮದ್ಯದ ಬಾಟಲಿಗಳ ಜೊತೆಗೆ ಮೊಟ್ಟೆಗಳ ಟ್ರೇಗಳು, ಗ್ಯಾಸ್ ಸಿಲಿಂಡರ್ ಇತ್ಯಾದಿ ಪತ್ತೆಯಾಗಿದ್ದವು. ಕೂಡಲೇ ಅಧಿಕಾರಿಗಳು ಘಟನೆಯ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ರವಾನಿಸಿದ್ದು ಪ್ರಾಂಶುಪಾಲರ ವಿರುದ್ಧ ಎಫ್.ಐ.ಆರ್. ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶಾಲೆಯ ಎಲ್ಲಾ ಕಡೆ ಸಿಸಿಟಿವಿ ಕ್ಯಾಮರಾಗಳಿದ್ದು, ಆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾ ಅಳವಡಿಸಿರಲಿಲ್ಲ. ಶಾಲಾ ಕಟ್ಟಡಕ್ಕೆ ತಾಗಿಕೊಂಡು ಕೊಠಡಿಯೊಂದನ್ನು ನಿರ್ಮಿಸಲಾಗಿದ್ದು ಆ ಕೊಠಡಿಯಲ್ಲಿ ಸುಮಾರು 15 ಮಂಚಗಳು ಕೂಡಾ ಇದ್ದವು. ಶಾಲಾ ಆವರಣದೊಳಗೆ ಮದ್ಯ ನಿಷೇಧವಿದ್ದರೂ ಆಕ್ಷೇಪಾರ್ಹ ವಸ್ತುಗಳನ್ನು ಯಾರು ಬಳಸುತ್ತಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಬೇಕಿದೆ.
