ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ ಕಚೇರಿ ಸಮೀಪದ ಮನೆಯಲ್ಲಿದ್ದ ಚಿನ್ನ ಮತ್ತು ಮೊಬೈಲನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ರಾಯಿ ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಬಾಗಲಕೋಟೆ ಮೂಲದ ನಿವಾಸಿಗಳು ವಾಸವಿದ್ದ ಮನೆಗೆ ಹಾಡು ಹಗಲೇ ನುಗ್ಗಿದ ಆರೋಪಿ, ಮನೆಯಲ್ಲಿದ್ದ ಚಿನ್ನದ ಸರ ಮೊಬೈಲ್ ಸೇರಿದಂತೆ ರೂ 50 ಸಾವಿರ ಮೌಲ್ಯದ ಸ್ವತ್ತು ಕಳವು ಮಾಡಿದ್ದ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಘಟನೆ ನಡೆದ ಮನೆ ಹತ್ತಿರದ ಸಿಸಿ ಕೆಮರಾವನ್ನು ಪೊಲೀಸರು ಪರಿಶೀಲಿಸಿ ಆರೋಪಿಯ ಮಾಹಿತಿ ಸಂಗ್ರಹಿಸಿ ನಂತರ ದಸ್ತಗಿರಿ ಮಾಡಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, DCP ಯವರಾದ ಸಿದ್ದಾರ್ಥ ಗೊಯಲ್ IPS (ಕಾ&ಸು), ದಿನೇಶ್ ಕುಮಾರ್ DCP (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಮತ್ತು ದಿವಾಕರ್ ರೈ , ಸಿದ್ದಪ್ಪ ನರನೂರು ಪೊಲೀಸ್ ಉಪ ನಿರೀಕ್ಷಕರು ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ನಾಗರಾಜ್ ಲಮಾಣಿ, ಅಕೀಲ್ ಅಹಮ್ಮದ್, ಚಂದ್ರಹಾಸ ರೈ ಮತ್ತು ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಸದರಿ ಆರೋಪಿಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಕ್ರ:121/2016 ಕಲಂ:454, 380 ಐಪಿಸಿ ಅಕ್ರ:71/2023 ಕಲಂ:457,380,511 ಐಪಿಸಿ ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಕ್ರ:310/2023 ಕಲಂ:380 ಐಪಿಸಿ ಯಂತೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.