ಬೆಳ್ತಂಗಡಿ: ಗೌಪ್ಯ ಉದ್ದೇಶಕ್ಕಾಗಿ ಕಾನೂನುಬಾಹಿರವಾಗಿ 42 ಸಿಮ್ ಕಾರ್ಡುಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದ ಐವರು ಯುವಕರನ್ನು ಧರ್ಮಸ್ಥಳ ಪೊಲೀಸರು ನೆರಿಯ ಗ್ರಾಮದ ತೊಟ್ಟಾಡಿ ಎಂಬಲ್ಲಿ ಫೆಬ್ರವರಿ 1ರಂದು ಬಂಧಿಸಿದ್ದಾರೆ.
ರಮೀಝ್ (20), ಅಕ್ಬರ್ ಆಲಿ (24), ಮೊಹಮ್ಮದ್ ಮುಸ್ತಾಫಾ (22), ಮೊಹಮ್ಮದ್ ಸಿದ್ಧೀಕ್ (27) ಮತ್ತು 17 ವರ್ಷದ ಹುಡುಗ ಬಂಧಿತ ಆರೋಪಿಗಳು.
ಆರೋಪಿಗಳಲ್ಲಿ ಒಬ್ಬನಾದ ಅಕ್ಬರ್ ಆಲಿ 2 ವರ್ಷ ದುಬೈಯಲ್ಲಿದ್ದು 4 ತಿಂಗಳ ಹಿಂದಷ್ಟೇ ಊರಿಗೆ ಮರಳಿದ್ದ. ದುಬೈಯಲ್ಲಿ ಇರುವಾಗಲೇ ಆತ ವಿವಿಧ ನಕಲಿ ಐಡಿ ಬಳಸಿ ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡುಗಳನ್ನು ತೆಗೆದುಕೊಂಡಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ವಿದೇಶಿ ನಂಟು ಇದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.