ಮೂಡುಬಿದಿರೆ: ನ್ಯಾಯಾಧೀಶರನ್ನೇ ವಂಚಿಸಲು ಪ್ರಯತ್ನಿಸಿದ ಅಸಾಮಿ


ಮೂಡುಬಿದಿರೆ: ಆರೋಪಿಗೆ ನಿರಪೇಕ್ಷಣಾ ಜಾಮೀನು ಪಡೆಯುವ ಸಂದರ್ಭ ನಕಲಿ ಆಧಾರ್ ಕಾರ್ಡ್ ನೀಡಿ ನ್ಯಾಯಾಧೀಶರನ್ನೇ ವಂಚಿಸಲು ಯತ್ನಿಸಿದ ಆರೋಪಿ ಸಿಕ್ಕಿಬಿದ್ದಿದ್ದು, ಆತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಕಂಕನಾಡಿ ಸುಲ್ತಾನ್‌ಗೋಲ್ಡ್ ಹತ್ತಿರದ ಸಿಟಿ ರೆಸಿಡೆನ್ಸಿ ನಿವಾಸಿ ಮೊಹಮ್ಮದ್ ಷರೀಫ್ ಬಂಧಿತ ಆರೋಪಿ. ಇನ್ನೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೊಹಮ್ಮದ್ ಇರ್ಫಾನ್ ಎಂಬವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಆತನಿಗೆ ನಿರಪೇಕ್ಷಣಾ ಜಾಮೀನು ಪಡೆಯುವ ಸಲುವಾಗಿ ಶಮೀರ್ ಬಷೀರ್ ಎಂಬ ಹೆಸರಿನ ನಕಲಿ ಆಧಾರ್ ಕಾರ್ಡ್, ಬಂಟ್ವಾಳದ ತುಂಬೆ ಗ್ರಾಮದ ಸರ್ವೆ ನಂಬ್ರ 77/10 ಇದರ ನಕಲು ಪಹಣಿ ಪತ್ರ ಹಾಜರುಪಡಿಸಿದ್ದರು.

ಬಹಳ ಚುರುಕಿನ ನ್ಯಾಯಾಧೀಶರೆಂದೇ ಹೆಸರಾದ ಮೂಡುಬಿದಿರೆ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಮಧುಕರ್ ಪಿ. ಭಾಗವತ್ ಅವರು ಮೊಹಮ್ಮದ್ ಷರೀಫ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತ ಅಸ್ಪಷ್ಟ ಉತ್ತರ ನೀಡಿದ್ದು ಸಂದೇಹಕ್ಕೆ ಕಾರಣವಾಗಿತ್ತು. ಆರೋಪಿಯಿಂದ ಬೇರೆ ಬೇರೆಯಾದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ದೊರೆತಿದ್ದು, ಈ ಹಿಂದೆಯೂ ಸಹ ನ್ಯಾಯಾಲಯಗಳಿಗೆ ವಂಚನೆ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ.

ನ್ಯಾಯಾಲಯದ ಶಿರಸ್ತೇದಾರರಾದ ಪ್ರಸನ್ನ ಬಿ. ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Previous Post Next Post

Contact Form