ಮೂಡುಬಿದಿರೆ: ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಹಾಸನ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಅವರ ಹಾಗೆಯೇ ಬಿಜೆಪಿಯ ಸಮಿತ್‌ರಾಜ್ ದರೆಗುಡ್ಡೆ ಕೂಡಾ ಅಂತಹದೇ ಕೆಲಸ ಮಾಡಿದ್ದಾರೆ. ಭಾರತ್ ಮಾತಾಕೀ ಜೈ ಎಂದು ಜೈಕಾರ ಹಾಕುವ ಸಮಿತ್ ಅದೇ ಮಾತೆಯರ, ಅಕ್ಕಂದಿರ ಅಶ್ಲೀಲ ವಿಡಿಯೋ ಮಾಡಿಟ್ಟುಕೊಂಡು ವಿಕೃತಿ ಮೆರೆಯುತ್ತಿದ್ದಾನೆ. ಕೇಸರಿ ಪವಿತ್ರವಾದುದು, ಸಮಿತ್‌ರಾಜ್ ಕೇಸರಿ ಧರಿಸಿ ಬಂದರೆ ಅದನ್ನು ಕಿತ್ತು ತೆಗೆಯುವ ಕೆಲಸ ಆಗಬೇಕು. ತನ್ನ ಹೆಸರಿನ ಎದುರು ದರೆಗುಡ್ಡೆ ಎಂಬ ಊರಿನ ಹೆಸರು ಬಳಸಿ ಊರವರ ಮುಖಕ್ಕೆ ಮಸಿಬಳಿಯುವ ಕೆಲಸ ಮಾಡಿದ ಸಮಿತ್ ಅವರನ್ನು ಊರಿನವರೂ ಬಹಿಷ್ಕರಿಸಬೇಕೆಂದರು. ಉಮಾನಾಥ ಕೋಟ್ಯಾನ್ ಅವರು ಭಯದಿಂದ ಹೊರಬರಲಿ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ಹೇಳಿದರು.
ಅವರು ಅಶ್ಲೀಲ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಶೇಖರಿಸಿ ಬ್ಲಾಕ್‌ಮೇಲ್ ತಂತ್ರಗಾರಿಕೆ ನಡೆಸುತ್ತಿದ್ದ ಆರೋಪಿ ಸ್ಥಾನದಲ್ಲಿರುವ ಹಿಂದು ಸಂಘಟನೆಗಳ ಮುಖಂಡ ಸಮಿತ್‌ರಾಜ್ ದರೆಗುಡ್ಡೆ ಪ್ರಕರಣಗಳನ್ನು ಎಸ್‌ಐಟಿ ಮೂಲಕ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಮೂಡುಬಿದಿರೆ ಮತ್ತು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ಮುಂಭಾಗದ ಪ್ರದೇಶದಲ್ಲಿ ಹಕ್ಕೊತ್ತಾಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸಭೆಯನ್ನುದ್ದೇಶಿಸಿ ಮಾತನಾಡಿ ಮೊಬೈಲ್‌ನಲ್ಲಿ ಹಿಂದು ಹೆಣ್ಣು ಮಕ್ಕಳ, ವಿದ್ಯಾರ್ಥಿಗಳ 50 ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವ ಹಿಂದು ಸಂಘಟನೆಗಳ ಮುಖಂಡನಾಗಿ ಗುರುತಿಸಿಕೊಂಡಿರುವ ರೋಲ್‌ಕಾಲ್, ಹಪ್ತಾ ವಸೂಲಿ, ಪುಡಿ ರೌಡಿ ಸಮಿತ್ ರಾಜ್ ದರೆಗುಡ್ಡೆ ವಿರುದ್ಧ ಜನರು ಜಾಗೃತರಾಗಬೇಕೆಂದು ಹೇಳಿದರು. 21 ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ಈ ರೌಡಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಬೆಳೆಸುತ್ತಿದ್ದಾರೆ. ಈ ಹಿಂದೆ ಆರೋಪಿ ಕ್ಷೇತ್ರದಲ್ಲಿ ಕೋಮುಸೌಹಾರ್ದವನ್ನು ಹಾಳುಮಾಡಲು ಸಮಿತ್‌ರಾಜ್ ಷಡ್ಯಂತ್ರ ರೂಪಿಸಿ ಪ್ರಕರಣ ದಾಖಲಾದಾಗ ಪೊಲೀಸ್ ಠಾಣೆಯಿಂದ ಖುದ್ದು ಶಾಸಕ ಉಮಾನಾಥ ಕೋಟ್ಯಾನ್ ಅವರೇ ಕರೆದೊಯ್ದ ಇತಿಹಾಸವು ಇದೆ. ಈತನ ಬಗ್ಗೆ ಹಿಂದೂ ಕಾರ್ಯಕರ್ತರಲ್ಲೂ ಅಸಮಾಧಾನ ಇದ್ದು, ಶಾಸಕರು ಈತನ ರಕ್ಷಣೆ ಮಾಡುವುದರ ಹಿಂದಿನ ಗುಟ್ಟೇನು ಎಂದು ಪ್ರಶ್ನಿಸಿದರು. ಇದರಲ್ಲಿ ಶಾಸಕರ ವಿಡಿಯೋ ಇದೆಯಾ ಎಂದು ಬಿಜೆಪಿಯವರೇ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಿಥುನ್ ರೈ ಹೇಳಿದರು.
ಸಮಿತ್‌ರಾಜ್ ದರೆಗುಡ್ಡೆ ಮೂಲಕ ದೌರ್ಜನ್ಯಕ್ಕೊಳಗಾದ ಅಮಾಯಕ ಯುವತಿಯರು, ವಿದ್ಯಾರ್ಥಿಗಳು, ಸಂತ್ರಸ್ತರು ಭಯಪಡದೆ ದೂರು ನೀಡಿದಲ್ಲಿ ಅವರಿಗೆ ಸೂಕ್ತ ನ್ಯಾಯ ಹಾಗೂ ರಕ್ಷಣೆ ನೀಡಲು ಬದ್ಧರಾಗಿರುವುದಾಗಿ ಭರವಸೆಯಿತ್ತರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ಹಿಂದು ಸಂಘಟಕ ಎಂದು ಪೋಸ್ ನೀಡುತ್ತಿರುವ ಸಮಿತ್‌ರಾಜ್ ಮಹಿಳೆಯರ ಮಾನಹಾನಿ ಹಪ್ತಾ ವಸೂಲಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಮೂಡುಬಿದಿರೆ ಮಾರುಕಟ್ಟೆಯ ಬೇನಾಮಿ ಒಳಗುತ್ತಿಗೆದಾರನಾಗಿ ಬಡ ವ್ಯಾಪಾರಸ್ಥರಿಂದ ಹೆಚ್ಚುವರಿ ದರ ವಸೂಲಿಗೆ ಇಳಿದಾಗ ತಾನು ಮುಂದೆ ನಿಂತು ಪ್ರತಿಭಟಿಸಿ ಮಾರ್ಕೇಟ್ ಗುತ್ತಿಗೆಯನ್ನು ರದ್ದು ಪಡಿಸಿರುವುದಾಗಿ ತಿಳಿಸಿದರು. ತಾನು ಮೂಡುಬಿದಿರೆಯಲ್ಲಿ ಇರುವ ತನಕ ಹಪ್ತಾ ವಸೂಲಿಗೆ ಅವಕಾಶ ನೀಡುವುದಿಲ್ಲ. ಮಾದಕ ದ್ರವ್ಯ ಮಾರಾಟದಲ್ಲಿಯೂ ಸಕ್ರಿಯನಾಗಿರುವ ಸಮಿತ್‌ರಾಜ್ ಅವರಂತಹ ಹಪ್ತಾ ವಸೂಲಿಯವರನ್ನು ಬೆಳೆಯಲು ಬಿಟ್ಟಿರುವುದು ಬಿಜೆಪಿಯವರ ಷಂಡತನ. ತಾನು ಚುನಾವಣೆ ಸೋತಿರಬಹುದು, ಆದರೆ ಬದುಕಿರುವವರೆಗೆ ಜನರಿಗೆ ಬೆಂಬಲವಾಗಿ ನಿಂತು ನ್ಯಾಯ ಒದಗಿಸಿಕೊಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ಮಾತನಾಡಿ ಸಮಿತ್‌ರಾಜ್ ಅಶ್ಲೀಲ ವಿಡಿಯೋಗಳ ತನಿಖೆಗೆ ಆಗ್ರಹಿಸಿ ಇಲ್ಲಿಯ ಶಾಸಕರು ರಾಜ್ಯದ ಗೃಹ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸುವಂತೆ ಸಲಹೆಯಿತ್ತರು. ಸಮಿತ್‌ರಾಜ್ ಅವರ ಅಶ್ಲೀಲ ವಿಡಿಯೋಗಳ ಬಗ್ಗೆ ಮಾತನಾಡುವುದಕ್ಕೂ ಹೇಸಿಗೆಯಾಗುತ್ತದೆ. ಅಶ್ಲೀಲ ವಿಡಿಯೋ ಮಾಡಿಟ್ಟುಕೊಂಡ ಈತ ರಾಜಕೀಯ ದ್ರೋಹಿ ಮಾತ್ರ ಅಲ್ಲ, ಸಮಾಜ ದ್ರೋಹಿ ಹಾಗೂ ಧರ್ಮ ದ್ರೋಹಿಯೂ ಹೌದು. ಈ ಸಂದರ್ಭದಲ್ಲಿ ಬಿಜೆಪಿ ಸಂಘಪರಿವಾರ, ನೈತಿಕತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು. ಯಾವಾಗಲೂ ನೈತಿಕತೆಯ ಬಗ್ಗೆ ಮಾತನಾಡುವ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ ಕಾರಂತರು ಸಮಿತ್‌ರಾಜ್‌ನನ್ನು ಹಿಂಜಾವೇ ಜವಾಬ್ದಾರಿಯಿಂದ ಮುಕ್ತಗೊಳಿಸಿ ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತ್‌ರಾಜ್ ದರೆಗುಡ್ಡೆ ಪ್ರಕರಣಗಳ ಎಸ್‌ಐಟಿ ತನಿಖೆಗೆ ಒತ್ತಾಯಿಸಿ ಮೂಡುಬಿದಿರೆ ಠಾಣಾಧಿಕಾರಿ ಸಂದೇಶ್ ಪಿಜಿ ಅವರಿಗೆ ಮನವಿ ನೀಡಲಾಯಿತು. ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಯುವ ಅಧ್ಯಕ್ಷ ಅನೀಶ್ ಡಿಸೋಜಾ, ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಅರುಣ್ ಶೆಟ್ಟಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಕಾಂಗ್ರೆಸ್ ಪ್ರಮುಖರಾದ ವಸಂತ ಬೆರ್ನಾರ್ಡ್, ಚಂದ್ರಹಾಸ ಸನಿಲ್, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಮತ್ತಿತರರು ಭಾಗವಹಿಸಿದ್ದರು.
ಉಮಾನಾಥ ಕೋಟ್ಯಾನ್ ತುಟಿಬಿಚ್ಚಲ್ಲ ಯಾಕೆ?
ಹಿಂದುತ್ವದ ಮುಖವಾಡ ಹಾಕಿಕೊಂಡು ನೀಚ ಕೃತ್ಯಗಳನ್ನು ಮಾಡುವ ಸಮಿತ್‌ರಾಜ್ ದರೆಗುಡ್ಡೆ ಅವರನ್ನು ಸಂಘಟನೆಯಿAದ ಉಚ್ಛಾಟನೆ ಯಾವಾಗ? ಈ ಘಟನೆಯ ಬಗ್ಗೆ ಶಾಸಕರು ಮೌನ ಮುರಿಯುವುದು ಯಾವಾಗ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ತೀವ್ರವಾಗಿ ಹರಿಹಾಯ್ದಿದ್ದಾರೆ. ಇದು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ. ತಮ್ಮ ಪಕ್ಷ ಮುಂದೆ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ 'ಸಮಿತ್‌ರಾಜ್ ಉಚ್ಛಾಟನೆ ಯಾವಾಗ? ಶಾಸಕರು ಮೌನ ಮುರಿಯುವುದು ಯಾವಾಗ?' ಎಂಬ ಬ್ಯಾನರ್ ಅಭಿಯಾನವನ್ನು ಮಾಡುವುದು ಶತಃಸಿದ್ಧ ಎಂದರು.
ಹಲವು ಕಳಂಕಗಳನ್ನು ಹೊತ್ತಿರುವ ಸಮಿತ್‌ರಾಜ್ ಅವರನ್ನು ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶಿಸಿರುವ ಹಿಂದೆ ಆತನ ಎಲ್ಲಾ ಕೆಲಸಕ್ಕೂ ಶಾಸಕರ ಅಭಯ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂಗಳ ಅಂಗಡಿಗೇ ಕಲ್ಲು ಬಿಸಾಡಿ ಅಶಾಂತಿ ಸೃಷ್ಟಿಸುವ ಹುನ್ನಾರ ಮಾಡಿದ ಸಮಿತ್‌ರಾಜ್ ಅವರ ವಿರುದ್ಧ ನಾವು ನಿಲ್ಲಬೇಕಿಲ,್ಲ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತೆಯರೇ ಚಪ್ಪಲಿ ಪೂಜೆ ಮಾಡಲು ಸಾಕು ಎಂದು ಮಿಥುನ್ ರೈ ಹೇಳಿದರು.
ಈ ಸಂದರ್ಭದಲ್ಲಿ ಸಮಿತ್‌ರಾಜ್ ದರೆಗುಡ್ಡೆ ಪ್ರಕರಣಗಳ ಎಸ್‌ಐಟಿ ತನಿಖೆಗೆ ಒತ್ತಾಯಿಸಿ ಮೂಡುಬಿದಿರೆ ಠಾಣಾಧಿಕಾರಿ ಸಂದೇಶ್ ಪಿಜಿ ಅವರಿಗೆ ಮನವಿ ನೀಡಲಾಯಿತು.