ಮುಂಬಯಿ, ಅ.09: ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅನುಪಮ ಮತ್ತು ಅಪಾರ ಕೊಡುಗೆಯ ಮೂಲಕ ಸಮಾಜದಲ್ಲಿ ದೀರ್ಘಕಾಲೀನ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಭಾವವನ್ನು ಮೂಡಿಸಿರುವ ರಾಯನ್ ಗ್ರೂಫ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ| ಮೇಡಂ ಗ್ರೇಸ್ ಪಿಂಟೋ ಅವರಿಗೆ ಜೀವನ ಸಾಧನೆ ಮತ್ತು ವ್ಯವಹಾರ ನಾಯಕತ್ವಕ್ಕಾಗಿ ಮಹಾತ್ಮಾ ಫೌಂಡೇಶನ್ ಮತ್ತು ಆದಿತ್ಯ ಬಿರ್ಲಾ ಸಮೂಹವು `ಮಹಾತ್ಮಾ ಅವಾರ್ಡ್-2025' ಪ್ರದಾನಿಸಿ ಗೌರವಿಸಲಾಯಿತು.
ನವ ದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆಸಲ್ಪಟ್ಟ ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಮತ್ತು ಭಾರತ ರಾಷ್ಟ್ರದ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಡಾ| ಕಿರಣ್ ಬೇಡಿ ಮುಖ್ಯ ಅತಿಥಿsಯಾಗಿದ್ದು, ಡಾ| ಗ್ರೇಸ್ ಪಿಂಟೋ ಅವರಿಗೆ `ಮಹಾತ್ಮಾ ಅವಾರ್ಡ್' ಪ್ರದಾನಿಸಿ ಅಭಿನಂದಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ರಾಷ್ಟ್ರೀಯ ಗಾಂಧಿ ಮ್ಯೂಸಿಯಂ ನಿರ್ದೇಶಕ ಎ.ಅಣ್ಣಾಮಲೈ ಮತ್ತು ಕೊಂಕಣ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್‌ನ ಸಿಎಂಡಿ ಸಂತೋಷ್ ಕುಮಾರ್ ಝಾ ಉಪಸ್ಥಿತರಿದ್ದು ಮೇಡಂ ಪಿಂಟೋ ಅವರಿಗೆ ಶುಭಾರೈಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಭಾರತೀಯ ನೃತ್ಯಾಂಗನಾ ಮತ್ತು ಸಾಮಾಜಿಕ ಕಾರ್ಯಕರ್ತೆ ಡಾ| ಮಾಲಿಕಾ ಸರಾಭಾಯಿ, ಗೇಲ್ ಇಂಡಿಯಾ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಸಂದೀಪ್ ಕುಮಾರ್ ಗುಪ್ತ, ನವಿನ್ ಫ್ಲೂರೈನ್ ಇಂಟರ್‌ನ್ಯಾಷನಲ್ ಮತ್ತು ಮಫತ್‌ಲಾಲ್ ಸಮೂಹದ ಕಾರ್ಯನಿರ್ವಹಣಾ ಕಾರ್ಯಾಧ್ಯಕ್ಷ ವಿಶಾದ್ ಪಿ. ಮಫತ್‌ಲಾಲ್, ಎನ್‌ಎಲ್‌ಸಿ ಇಂಡಿಯಾ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್ ಮೋಟುಪಲ್ಲಿ, ಒಎನ್‌ಜಿಸಿ ನಿರ್ದೇಶಕ ಮನೀಶ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿಶ್ವದಾದ್ಯಂತ ನ್ಯಾಯ, ಕರುಣೆ ಮತ್ತು ಶಾಶ್ವತ ಭವಿಷ್ಯ ನಿರ್ಮಾಣಕ್ಕೆ ಬದ್ಧರಾಗಿರುವ ಧುರಿಣನ್ನು ಹಾಗೂ ಸಂಸ್ಥೆಗಳಿಗೆ ಈ ಮಹಾತ್ಮಾ ಪುರಸ್ಕಾರವನ್ನು ಪ್ರದಾನಿಸಿ ಗೌರವಿಸುತ್ತ್ತಿದ್ದು, ಸ್ಥಿರಾಭಿವೃದ್ಧಿ, ದಾನಶೀಲತೆ, ಹಂಚಿಕೊಂಡ ಮೌಲ್ಯಗಳು ಮತ್ತು ಸಾಮಾಜಿಕ ಹೊಣೆಗಾರಿಕೆ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಮನ್ನಿಸುತ್ತದೆ. ಈ ಪ್ರಶಸ್ತಿ ಗಾಂಧಿಯನ್ ಮತ್ತು ಭಾರತೀಯ ವಕೀಲ ಅಡ್ವಕೇಟ್ ಅಮಿತ್ ಸಚ್‌ದೇವ ಅವರ ಮುಂದಾಳತ್ವದಲ್ಲಿ, ಆದಿತ್ಯ ಬಿರ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಸಮುದಾಯ ಉಪಕ್ರಮಗಳ ಅಧ್ಯಕ್ಷೆ ರಾಜಶ್ರೀ ಬಿರ್ಲಾ ಅವರ ಸಹಯೋಗದೊಂದಿಗೆ ಮಹಾತ್ಮಾ ಗಾಂಧಿಜೀ ಅವರ ಅಮರ ಪರಂಪರೆಯ ಸ್ಮರಣಾರ್ಥವಾಗಿ ನೀಡಲಾಗುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ದೃಷ್ಟಿಸಂಪನ್ನ ನಾಯಕತ್ವದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿದ ಡಾ| ಗ್ರೇಸ್ ಪಿಂಟೋ ಅವರ ತ್ಯಾಗ ಮತ್ತು ಸೇವೆಯನ್ನು ಪ್ರಶಂಸಿ, ಹಸಿರು ಮತ್ತು ಶಾಶ್ವತ ಭವಿಷ್ಯ ನಿರ್ಮಾಣದತ್ತ ಅವರ ಪರಿಸರಮುಖಿ ಉಪಕ್ರಮಗಳನ್ನೂ ಪ್ರಶಸ್ತಿಯಿಂದ ಗುರುತಿಸಲಾಯಿತು. ಈ ಗೌರವವು ಡಾ| ಪಿಂಟೋ ಅವರ ಶಿಕ್ಷಣದ ಮೂಲಕ ರಾಷ್ಟ್ರ ನಿರ್ಮಾಣ ಮತ್ತು ಮೌಲ್ಯಾಧಾರಿತ ನಾಯಕತ್ವ ಎಂಬ ಜೀವನ ಧ್ಯೇಯದ ಸ್ಮರಣೀಯ ಮಾನ್ಯತೆ ಇದಾಗಿದೆ ಎಂದು ಪುರಸ್ಕಾರ ಸಂಘಟಕರು ತಿಳಿಸಿದ್ದಾರೆ.
.jpg)