ಮೂಡುಬಿದಿರೆ: ಅಂತರರಾಷ್ಟ್ರೀಯ ಪ್ರವಾಸ ಅನುದಾನದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ 1.94 ಕೋಟಿಯನ್ನು ವಂಚನೆ ಮೂಲಕ ಇತರೆಡೆ ವರ್ಗಾಯಿಸಿದ್ದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ನ ಇಬ್ಬರು ಸಿಬ್ಬಂಧಿಗಳು ಹಾಗೂ ಅವರ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಯಶವಂತಪುರ ನಿವಾಸಿ ವಿ. ಸೌಂದರ್ಯ (25) ಹಾಗೂ ಹೇಸರಘಟ್ಟ ನಿವಾಸಿ ಆರ್. ದೀಪಿಕಾ (25) ಎಂದು ಗುರುತಿಸಲಾಗಿದೆ. ಇಬ್ಬರೂ IISc ರೆಜಿಸ್ಟ್ರಾರ್ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ದೀಪಿಕಾ ಅವರ ಸ್ನೇಹಿತ ಸಚಿನ್ ರಾವ್ (25) ಕೂಡ ವಂಚನೆಗೆ ಸಹಾಯ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ.
ಹೇಗೆ ನಡೆದಿದೆ ಹಗರಣ?
ಪೊಲೀಸರ ಪ್ರಕಾರ, ಜೂನ್ 2024 ರಿಂದ ಅಕ್ಟೋಬರ್ 2025ರವರೆಗೆ ಈ ಸಿಬ್ಬಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಅನುಮೋದನಾ ಪತ್ರಗಳನ್ನು ತಯಾರಿಸಿ, ವಿದ್ಯಾರ್ಥಿಗಳ ವಿದೇಶ ಪ್ರಯಾಣ ಅನುದಾನವನ್ನು ತಮ್ಮ ಸಂಬಂಧಿಕರು ಮತ್ತು ಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದರು.
IISc ಅಧಿಕಾರಿಗಳು ಅಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ಅನುದಾನ ವಿತರಣೆ ನಡೆದಿರುವುದು ಗಮನಿಸಿದಾಗ ಹಗರಣ ಬಯಲಾಗಿದೆ. ಪದವಿ ಪೂರ್ಣಗೊಳಿಸಿದ ಹಳೆ ವಿದ್ಯಾರ್ಥಿಗಳಿಗೂ ಅನುದಾನ ನೀಡಿದ್ದು ಅನುಮಾನ ಹುಟ್ಟಿಸಿತು.
ಆಂತರಿಕ ಆಡಿಟ್‌ನಲ್ಲಿ ಬಯಲಾಗಿದ್ದ ದಂಧೆ:
ರೆಜಿಸ್ಟ್ರಾರ್ ಆದೇಶದಂತೆ ನಡೆಸಿದ ಆಂತರಿಕ ಲೆಕ್ಕಪರಿಶೀಲನೆಯಲ್ಲಿ, ಇಬ್ಬರು ಸಹಾಯಕ ಕ್ಲರ್ಕರು ವಿದ್ಯಾರ್ಥಿಗಳ ದಾಖಲೆಗಳನ್ನು ತಿದ್ದುಪಡಿ ಮಾಡಿ, ನಕಲಿ ಅರ್ಜಿಗಳ ಮೂಲಕ ನಕಲಿ ಅನುದಾನ ಮಂಜೂರು ಮಾಡಿದ್ದನ್ನು ಪತ್ತೆ ಹಚ್ಚಲಾಯಿತು.
ದೀಪಿಕಾ ಅವರ ಸ್ನೇಹಿತ ಸಚಿನ್ ರಾವ್ ಅವರ ಹೆಸರಲ್ಲಿಯೇ ಒಂದು ನಕಲಿ ಅನುದಾನ ಮಂಜೂರಾಗಿದೆ ಎಂಬುದು ಕೂಡಾ ಆಡಿಟ್‌ನಲ್ಲಿ ಬಹಿರಂಗವಾಯಿತು.
ದೋಚಿದ ಹಣದಿಂದ ಭೂಮಿ, ಕಾರು, ಚಿನ್ನದ ಆಭರಣಗಳ ಖರೀದಿ:
ಹಗರಣದಲ್ಲಿ ಬಂದ ಹಣದಿಂದ ದೀಪಿಕಾ ಸಚಿನ್ ರಾವ್ ಅವರ ಹೆಸರಿನಲ್ಲಿ ಜಾಗ, ಚಿನ್ನಾಭರಣ ಮತ್ತು ಕಾರು ಖರೀದಿಸಿದ್ದಾಳೆ. ಸೌಂದರ್ಯ ಕೂಡ ತನ್ನ ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಮತ್ತು ಬೆಲೆಬಾಳುವ ವಸ್ತುಗಳನ್ನು ಪಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ದೋಚಿದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರೆಂಬ ಆರೋಪವೂ ಇದೆ.
ತನಿಖೆಯಲ್ಲಿ ಪೊಲೀಸರು ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ, ಇದರಲ್ಲಿ 80 ಲಕ್ಷ ಮೌಲ್ಯದ ಆಸ್ತಿ ದಾಖಲೆಗಳು, 15 ಲಕ್ಷ ಮೌಲ್ಯದ ಚಿನ್ನಾಭರಣ, 11 ಲಕ್ಷ ನಗದು, ಒಂದು ಕಾರು ಸೇರಿದೆ.
ಸೌಂದರ್ಯ ಮತ್ತು ದೀಪಿಕಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಸಚಿನ್ ರಾವ್ ಅವರ ತನಿಖೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
