ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 23 ಪಿಯು ಕಾಲೇಜುಗಳು ಈ ಶೈಕ್ಷಣಿಕ ವರ್ಷದಲ್ಲಿ ಶೂನ್ಯ ಪ್ರವೇಶವನ್ನು ದಾಖಲಿಸಿದ್ದು, ದಾಖಲೆಗಳಲ್ಲಿ ಮಾತ್ರ ‘ಕಾಲೇಜುಗಳಾಗಿ ಅಸ್ತಿತ್ವದಲ್ಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಈ ಎಲ್ಲವೂ ಅನುದಾನರಹಿತ ಖಾಸಗಿ ಕಾಲೇಜುಗಳು ಆಗಿದ್ದು, ಕಡಿಮೆ ಪ್ರವೇಶ, ಹೆಚ್ಚುತ್ತಿರುವ ವೆಚ್ಚ ಹಾಗೂ ನಿರ್ವಹಣಾ ಭಾರದಿಂದ ಸಂಕಷ್ಟದಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ 15 ಅನುದಾನರಹಿತ ಪಿಯು ಕಾಲೇಜುಗಳು ಅಧಿಕೃತವಾಗಿ ಮುಚ್ಚಲ್ಪಟ್ಟಿದ್ದು, ಇನ್ನೂ ಎರಡು ಸಂಸ್ಥೆಗಳು ಮುಚ್ಚಲು ಅರ್ಜಿ ಸಲ್ಲಿಸಿವೆ.
ಪಿಯು ಇಲಾಖೆಯ ಅಧಿಕಾರಿಯೊಬ್ಬರು ಹೇಳುವಂತೆ, ಈ ಕಾಲೇಜುಗಳು ಆರಂಭವಾದಾಗ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಹಣಕಾಸಿನ ವ್ಯವಸ್ಥೆ ನಡೆಯುತ್ತಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಪ್ರವೇಶ ಸಂಖ್ಯೆ ಕುಸಿಯುತ್ತ ಬಂದಿದ್ದು, ಶುಲ್ಕ, ಆದಾಯ ತೀವ್ರವಾಗಿ ಕಡಿಮೆಯಾದ ಕಾರಣ ಸಿಬ್ಬಂದಿಗಳ ವೇತನ, ಮೂಲಭೂತ ವೆಚ್ಚ ಮುಂತಾದವರನ್ನು ನಿರ್ವಹಿಸುವುದು ಕಷ್ಟವಾಗಿದೆ. ಇದರ ಪರಿಣಾಮವಾಗಿ ಅನೇಕ ಖಾಸಗಿ ಅನುದಾನರಹಿತ ಕಾಲೇಜುಗಳು ಹೊಸ ಪ್ರವೇಶಗಳನ್ನು ಸ್ವೀಕರಿಸಲು ಮುಂದಾಗುತ್ತಿಲ್ಲ.
ಪ್ರಸ್ತುತ ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರದ ಪಿಯು ಕಾಲೇಜುಗಳನ್ನು ಸೇರಿಸಿ ಜಿಲ್ಲೆಯಲ್ಲಿ ಒಟ್ಟು 212 ಕಾಲೇಜುಗಳಿವೆ. ಆದರೆ ಶೂನ್ಯ ಪ್ರವೇಶ ಪಡೆದ 23 ಕಾಲೇಜುಗಳು ಇನ್ನೂ ದಾಖಲೆಗಳಲ್ಲಿ ಉಳಿದಿವೆ.
ಒಂದು ಕಾಲೇಜನ್ನು ಅಧಿಕೃತವಾಗಿ ಮುಚ್ಚಲು ಸಂಸ್ಥೆಯೇ ಮೊದಲಿಗೆ ಮುಚ್ಚುವಂತೆ ಅರ್ಜಿ ಸಲ್ಲಿಸಬೇಕು ಹಾಗೂ ಇಲಾಖೆಯ ಅನುಮೋದನೆ ಅಗತ್ಯ. ಅದಾಗುವವರೆಗೆ, ಕಾರ್ಯನಿರ್ವಹಿಸದ ಕಾಲೇಜುಗಳೂ ಕೂಡ ದಾಖಲೆಗಳಲ್ಲಿ “ಸಕ್ರಿಯ” ಎಂಬಂತೆ ಉಳಿಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
