ಮಂಗಳೂರು, ನವೆಂಬರ್ 6: ಮಂಗಳೂರು ವಿಶ್ವವಿದ್ಯಾನಿಲಯವು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ರೂ. 7 ಕೋಟಿ ರೂಪಾಯಿಗಳ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (RUSA–I) ನಿಧಿಯನ್ನು ದುರ್ಬಳಕೆ ಮಾಡಿರುವುದಾಗಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಹುಡುಗರ ಮತ್ತು ಹುಡುಗಿಯರ ಹಾಸ್ಟೆಲ್ ನಿರ್ಮಾಣಕ್ಕಾಗಿ ನೀಡಲಾದ ಈ ಮೊತ್ತದ ಉಪಯೋಗ ಪ್ರಮಾಣಪತ್ರವನ್ನು (Utilisation Certificate) ವಿಶ್ವವಿದ್ಯಾಲಯವು ಸರ್ಕಾರಕ್ಕೆ ಸುಳ್ಳಾಗಿ ಸಲ್ಲಿಸಿದ್ದಾಗಿದೆ ಎಂದು ವಿಶ್ವವಿದ್ಯಾಲಯವೇ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ (KSHEC) ನೀಡಿದ ಪ್ರತಿಕ್ರಿಯೆಯಲ್ಲಿ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.
ವಿಶ್ವವಿದ್ಯಾನಿಲಯದ ಸಂಸ್ಥಾ ಅಭಿವೃದ್ಧಿ ಯೋಜನೆಯಡಿ ಹುಡುಗರ ಹಾಗೂ ಹುಡುಗಿಯರ ಪ್ರತ್ಯೇಕ ವಸತಿಗೃಹ ನಿರ್ಮಾಣಕ್ಕಾಗಿ ರೂ. 7 ಕೋಟಿ ಮಂಜೂರು ಮಾಡಲಾಗಿತ್ತು. ಆದರೆ 2013ರಿಂದ 2017ರವರೆಗೆ ನಿಧಿ ಬಿಡುಗಡೆಗೊಂಡಿದ್ದರೂ ಯಾವುದೇ ನಿರ್ಮಾಣ ಕಾರ್ಯ ನಡೆದಿಲ್ಲ ಎಂಬುದನ್ನು KSHECನ ತಜ್ಞ ಸಮಿತಿಯ ಪರಿಶೀಲನೆ ಬಹಿರಂಗಪಡಿಸಿದೆ. ವಿಶ್ವವಿದ್ಯಾಲಯಕ್ಕೆ ಒಟ್ಟು ರೂ. 20 ಕೋಟಿ ಬಿಡುಗಡೆಗೊಂಡಿತ್ತು.
ಸಮಿತಿಯ ಸದಸ್ಯರು ಸ್ಥಳ ಪರಿಶೀಲನೆ ವೇಳೆ ಯಾವುದೇ ಹಾಸ್ಟೆಲ್ ಕಟ್ಟಡಗಳು ಇಲ್ಲದಿರುವುದನ್ನು ಕಂಡು ಬೆಚ್ಚಿಬಿದ್ದರು. ವಿಚಾರಿಸಿದಾಗ, ವಿಶ್ವವಿದ್ಯಾಲಯದ ಅಧಿಕಾರಿಗಳು ಹಣವನ್ನು ಅಂತರರಾಷ್ಟ್ರೀಯ ಹಾಸ್ಟೆಲ್ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ತಪ್ಪುಮಾಹಿತಿ ನೀಡಲು ಯತ್ನಿಸಿದರೆಂದು ವರದಿಯಾಗಿದೆ.
ಆದರೆ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ ಉಪಯೋಗ ಪ್ರಮಾಣಪತ್ರದಲ್ಲಿ ಹುಡುಗರ ಮತ್ತು ಹುಡುಗಿಯರ ಹಾಸ್ಟೆಲ್ ಎರಡನ್ನೂ ನಿರ್ಮಿಸಲಾಗಿದೆ ಎಂದು ಸುಳ್ಳು ದಾವೆ ಮಾಡಲಾಗಿದೆ.
ಈ ಪ್ರಕರಣವನ್ನು ನಂತರ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಯೋಜನಾ ನಿರ್ದೇಶಕರ ಸಭೆಯಲ್ಲಿ (SPD Meeting) ಚರ್ಚಿಸಲಾಯಿತು. ಚರ್ಚೆಯ ನಂತರ, ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲಾಯಿತು.
ಇದೇ ವೇಳೆ ಉನ್ನತ ಶಿಕ್ಷಣ ಪರಿಷತ್ತು, ದುರ್ಬಳಕೆಯಾದ ನಿಧಿಯನ್ನು ವಾಪಸು ಪಡೆಯುವಂತೆ ಮತ್ತು ಜವಾಬ್ದಾರರ ವಿರುದ್ಧ ದಂಡ ವಿಧಿಸುವಂತೆ ಶಿಫಾರಸು ಮಾಡಿದೆ.
